Index   ವಚನ - 130    Search  
 
ಹರನಿಂದೆ ಗುರುನಿಂದೆ ಪರನಿಂದ್ಯವ ತೊರೆದು ಶಿವಕೇಳಿಯೊಳಿಂಬುಗೊಂಡ ಕರ್ಣಕ್ಕೆ ಕರ್ಣೇಂದ್ರಿಯವೆಲ್ಲಿಹುದೋ? ಕಾಮವೆಂಬ ಶೀತ, ಕ್ರೋಧವೆಂಬ ಉಷ್ಣ, ಮೋಹನ ಮುದ್ದುಮುಖ ಮೊಲೆ, ಅಂಗನೆಯೆಂಬ ಮೃದು, ವಿಷಯಾತುರವೆಂಬ ಕಠಿಣವ ಮುಟ್ಟದೆ, ಲಿಂಗ ಮುಟ್ಟಿ ಲಿಂಗವ ಪೂಜಿಸಿ ಲಿಂಗವ ಮೋಹಿಪ ಹಸ್ತಕ್ಕೆ ತ್ವಗಿಂದ್ರಿಯವೆಲ್ಲಿಯದೋ? ಶ್ವೇತ ಪೀತ ಹರಿತ ಮಾಂಜಿಷ್ಟ ಮಾಣಿಕ್ಯ ಕಪೋತವರ್ಣವೆಂಬ ಷಡುರೂಪವ ಕಳೆದು ಲಿಂಗದ ಷಡುರೂಪದೊಳಿಂಬುಪಡೆದುಕೊಂಡು ಅನಿಮಿಷದೃಷ್ಟಿ ಇಟ್ಟ ನಯನಕ್ಕೆ ನೇತ್ರೇಂದ್ರಿಯವೆಲ್ಲಿಯದೊ? ತಿಕ್ತ ಕಟು ಕಷಾಯ ಮಧುರ ಆಮ್ಲ ಲವಣವೆಂಬ ಷಡುರುಚಿಗೆಳಸದೆ, ಲಿಂಗಾನುಭಾವಾಮೃತವ ಸೇವಿಪ ಜಿಹ್ವೆಗೆ ಜಿಹ್ವೇಂದ್ರಿಯವೆಲ್ಲಿಯದೋ? ಗಂಧ ದುರ್ಗಂಧವನಳಿದು ಸ್ವಾನುಭಾವಸದ್ವಾಸನೆಗೆಳಸಿಪ್ಪ ನಾಸಿಕಕ್ಕೆ ಘ್ರಾಣೇಂದ್ರಿಯವೆಲ್ಲಿಯದೋ? ಇಂತೀ ಪಂಚೇಂದ್ರಿಯಮುಖದಲ್ಲಿ ಪಂಚವದನನ ಮುಖವಾಗಿಪ್ಪ ಶಿವಶರಣರು ಲಕ್ಷಗಾವುದದಲ್ಲಿದ್ದರೂ ಇರಲಿ, ಅಲ್ಲಿಗೆನ್ನ ಮನಮಂ ಹರಿಯಬಿಟ್ಟು ನಮಸ್ಕರಿಸುವೆನು. ಕಂದ : ಲಕ್ಷಯೋಜನದೊಳಾಡೆ ಮುಕ್ಕಣ್ಣನ ಶರಣನೈದನೆನೆ ಕೇಳ್ದೊಲವಿಂ ದಿಕ್ಕನೆ ಮನಮಂ ಕಳುಹಿ ಪ ದಕ್ಕೆರಗುವೆ ನಾಂ ಪ್ರಸನ್ನಶಂಕರಲಿಂಗ ಈ ಕಾರಣ ನಿಮ್ಮ ಶರಣರ ನೆನೆದು ನೋಡಿ ವಾರ್ತೆಯ ಕೇಳಿ ಮನಮುಟ್ಟಿ ದರುಶನವ ಮಾಡಲೆನ್ನ ಭವ ಹಿಂಗಿತ್ತು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.