Index   ವಚನ - 132    Search  
 
ಅನ್ಯವಿಷಯ ಪಂಚೇಂದ್ರಿಯವೆಂದೆಂಬ ಕುನ್ನಿಗಳ ಬಲೆಯೊಳಗಿರಿಸಬೇಡವೊ ಗುರುವೆ. ಹರಗುರು ನಿಂದೆಕಾರರ ಕಾವ್ಯಕಥೆಗಳ ಒರೆದು ಕೇಳುವರೆನ್ನವೆರಡು ಕಿವಿಯು ತಾ ಹಿಡಿದಾಕಾರಕೆ ಬಾಯದೆರದು ರಂಜಿಸುತಲಿಹೆ ಪರಮಾತ್ಮನ ಶ್ರುತಿ ಮಂತ್ರಾಗಮಂಗಳ ವಿರಚಿಸಲೊಲ್ಲದೆ ಕುರಿಯ ದನಿಗೆ ಹುಲಿ ಶರೀರವನಳಿದಂತೆ ಕರ್ಣೇಂದ್ರಿಯ ದೇವ. | 1 | ಅನ್ಯಗೋಷ್ಠಿಯ ಪರನಿಂದ್ಯಗಳ ನುಡಿವರೆ ಎನ್ನಾ ನಾಲಗೆ ಹರಿವುದುರುಗನಂತೆ `ಓನ್ನಮಃಶಿವಾಯ'ಯೆಂಬ ಮಂತ್ರವ ನೆನೆಯದಲ್ಲಿ ತನ್ನ ತಾ ಹಿಂದಕ್ಕೆ ಸೇದುತಲಿದೆ ಕರ್ಮಿ ಗಿನ್ನೆಂತೊ ಹೇಳಾ ಗುರುವೆ ಮಾಂಸದ ಸವಿಗೆ ಮೀನು ತನ್ನ ದೇಹವನಳಿದಂತೆ ಜಿಹ್ವೇಂದ್ರಿಯವು. | 2 | ಪರಧನ ಪರಸ್ತ್ರೀಯರಾಟ ನೋಟಗಳನು ನೆರೆ ನೋಡುವರೆನ್ನ ನಯನ ತಿಗುರಿಯಂತೆ ತಿರುಗುತಲಿಗೆ ಸದಾ ಅನ್ಯಾಯವನಾಶ್ರಯಿಸಿ ಹರಗುರುಲಿಂಗ ಪೂಜೆಗೆ ಅನಿಮಿಷದೃಷ್ಟಿ ಇರಿಸಿ ನೋಡದೆ ತಾ ಪತಂಗ ಹಾರಿಯೆ ಬಂದು ಉರಿಯೊಳು ಮಡಿದಂತೆ ನಯನೇಂದ್ರಿಯ ದೇವಾ. | 3 | ಜೂಜು ಪಗಡಿ ಲೆತ್ತನಾಡಿ ಪರನಾರಿಯರ ವಾಜಿಯಿಂದಲಿ ಹಿಡಿದೆಳೆವರೆ ದ್ವಿಹಸ್ತ ರಾಜಿಸುತಿದೆ ರಮ್ಯವಾಗಿ, ಹರಗುರುಲಿಂಗದ ಪೂಜೆಯ ಮಾಡೇನೆಂದರೆ ಕೈ ಏಳದೆ ಕರ್ಮ ಭಾಜನದೊಳು ಸಿಲ್ಕಿ ಸ್ಪರ್ಶೇಂದ್ರಿಯದಿ ಕರಿ ತಾ ಜೀವಮೃತವಾದಂತೆ ತ್ವಗಿಂದ್ರಿಯ. | 4 | ಪೂಸಿಪ ಗಂಧ ಚಂದನ ಪರಿಮಳಗಳ ವಾಸಿಸುವಂತೆ ಲಿಂಗಾನುಭವದ ಜ್ಞಾನ ವಾಸನೆಯರಿಯದೆ ಸಂಪಿಗೆಗಳಿ ಮಡಿದಂದದಿ ನಾಸಿಕೇಂದ್ರಿಯ ಇವೈದರಿಂದಲಿ ಮಹಾ ದೋಷಕೀಡಾದೆ ಪಡುವಿಡಿ ಸಿದ್ಧಮ- ಲ್ಲೇಶಾ ಎನ್ನನು ಕಾಯಿದು ರಕ್ಷಿಸು ಕರುಣಾಂಬುವೆ. | 5 |