Index   ವಚನ - 134    Search  
 
ವಿಕಾರದೊಳು ವಿಕಾರ ಕಪಿವಿಕಾರ. ವಿಕಾರದೊಳು ವಿಕಾರ ಸುರೆಗುಡಿದವನ ವಿಕಾರ. ವಿಕಾರದೊಳು ವಿಕಾರ ದತ್ತೂರಿಯ ಸವಿದ ವಿಕಾರ. ಇಂತೀ ಎಲ್ಲಕೆ ಗುರು ಮನೋವಿಕಾರವೆಂಬುದು. ಸುರೆ ದತ್ತೂರಿಯ ಸವಿದವನದು ಒಂದಿನಕಾದರೂ ಪರಿಹಾರವಾಗುವದು. ಮನೋವಿಕಾರದ ದತ್ತೂರಿ ಅನುದಿನ ತಲೆಹೇರಿಕೊಂಡು ಮುಳುಗಿತ್ತು. ಭೂಲೋಕದ ಯತಿ ಸಿದ್ಧ ಸಾಧ್ಯರ ಕೊಂಡು ಮುಳುಗಿತ್ತು. ದೇವಲೋಕದ ದೇವಗಣ ಅಜಹರಿಸುರರ ಜನನಮರಣವೆಂಬ ಅಣಲೊಳಗಿಕ್ಕಿತ್ತು ಮನೋವಿಕಾರ. ಮನೋವಿಕಾರದಿಂದ ತನುವಿನಕಾರ, ಮನೋವಿಕಾರದಿಂದ ಮಾಯಾಮದ. ಮನೋವಿಕಾರದಿಂದ ಪಂಚಭೂತ ಸಪ್ತಧಾತು ದಶವಾಯು ಅರಿಷಡ್ವರ್ಗ ಅಷ್ಟಮದ ಪಂಚೇಂದ್ರಿಯ, ಅಂಗದೊಳು ಚರಿಸುವ ಜೀವ ಪ್ರಾಣ ಕರಣಾದಿ ಗುಣಂಗಳೆಲ್ಲಕ್ಕೆಯು ಮನವೆ ಮುಖ್ಯ ನೋಡಾ. ಮನೋವಿಕಾರವನಳಿದು ಶಿವವಿಕಾರದೊಳು ಇಂಬುಗೊಂಡಾತ ಮೂರುಲೋಕಾರಾಧ್ಯನೆಂಬೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.