Index   ವಚನ - 171    Search  
 
ಕೆಚ್ಚಲ ಕಚ್ಚಿದ ಉಣ್ಣೆ ನಿಚ್ಚಾಮೃತದ ಸವಿಯನೆತ್ತಬಲ್ಲುದಯ್ಯಾ? ಪಾಯಸದೊಳಿಹ ಸಟ್ಟುಗ ರುಚಿಯಬಲ್ಲುದೆ? ಸರ್ವವ ಮುಟ್ಟಿ ಮೂಸುವ ಮಕ್ಷಿಕ ಶುಚಿಯ ಬಲ್ಲುದೇನಯ್ಯಾ? ಸಂಸಾರದೋಷ ದುಸ್ಸಂಗ ದುಶ್ಚರಿತ್ರದೊಳಿಪ್ಪ ಮಾನವರು ಶಿವಜ್ಞಾನಾಮೃತದ ಸವಿಯನೆತ್ತ ಬಲ್ಲರಯ್ಯಾ? ಉಣ್ಣೆಯಂತೆ. ಹುಗ್ಗಿಯೊಳಿಹ ಹುಟ್ಟು ತೊಳಸಬಲ್ಲುದಲ್ಲದೆ ಸವಿಯ ಬಲ್ಲುದೇನಯ್ಯಾ? ವೇದಾಗಮವನೋದಿದ ಮಾನವರೆಲ್ಲ ಸಂಸಾರಬಂಧನವ ಕಳೆಯಬಲ್ಲರೇನಯ್ಯಾ? ಮನಮಕ್ಷಿಕ ಸರ್ವದುಚ್ಚಿಷ್ಠವ ಮುಟ್ಟಿ ಮುಟ್ಟಿ ಹಲವು ಕಡೆಗೆ ಹಾರುತಿರಲು, ಮಹದರುವನೆತ್ತ ಬಲ್ಲುದಯ್ಯಾ! ಪರಮಗುರು ಪಡುವಿಡಿ ಸಿದ್ದಮಲ್ಲಿನಾಥಪ್ರಭುವೆ.