Index   ವಚನ - 180    Search  
 
ಮನೆ ಮಡದಿ ಮಕ್ಕಳು ದ್ರವ್ಯ ಬಂಧುಬಳಗವೆಂಬುದು ಸಂಸಾರವಲ್ಲ ಕಾಣಿರೋ. ಸಂಸಾರವಾವುದೆಂದರೆ ಹೇಳುವೆ ಕೇಳಿರಣ್ಣ. ತನುವೆಂಬುದೆ ಮನೆ, ಪ್ರಾಣನಾಯಕನೆಂಬುವನೆನ್ನೊಡೆಯ, ಶರೀರಮಾಯೆಯೆಂಬುವಳೆ ಹೆಣ್ಣು, ಪಂಚಭೂತವೆ ಮಕ್ಕಳು ಕಾಣಿರಣ್ಣ. ಪಂಚೇಂದ್ರಿಯಮುಖದಲ್ಲಿ ಬಳಸುತಿಪ್ಪ ವಿಷಯವೆ ದ್ರವ್ಯಕಾಣಿರೊ. ಅರುವತ್ತಾರುಕೋಟಿ ಕರಣದೊಳಿಂಬುಗೊಂಡಿಪ್ಪುದೆ ಬಂಧುಬಳಗ. ಇಂತಪ್ಪ ಸಂಸಾರವನರಿಯದೆ, ತಮ್ಮ ತಿಂದು ತೇಗುವುದನರಿಯದೆ, ಹೋರಾಟದ ಸಂಸಾರವ ಕಂಡರೆ ಸಂಸಾರವೆಂದು ನುಡಿಯುತಿಪ್ಪರಯ್ಯ. ಈ ಸಂಸಾರಮಾಯೆಯ ಕಳೆದಿಪ್ಪವರೆನ್ನ ಪ್ರಾಣಲಿಂಗ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.