Index   ವಚನ - 218    Search  
 
ಧ್ಯಾನಕೆಲ್ಲ ಮೂಲ ಗುರುವಿನ ಮೂರ್ತಿ ಕಾಣಿರೊ! ಪೂಜೆಗೆಲ್ಲ ಮೂಲ ಗುರುವಿನ ಪಾದ ಕಾಣಿರೋ! ಮಂತ್ರಕೆಲ್ಲ ಮೂಲ ಗುರುವಿನ ವಾಕ್ಯ ಕಾಣಿರೋ! ಮುಕ್ತಿಗೆಲ್ಲ ಮೂಲ ಗುರುವಿನ ಕೃಪೆ ಕಾಣಿರೋ! ಗುರು ಹೇಳಿದಂತಿಹುದೆ ವೇದಾಗಮಶಾಸ್ತ್ರ ಕಾಣಿರೋ! ಸಾಕ್ಷಿ: ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ರ್ಪದಂ | ಮಂತ್ರಮೂಲಂ ಗುರೋರ್ವಾಕ್ಯಂ | ಮುಕ್ತಿಮೂಲಂ ಗುರೋಃ ಕೃಪಾ ||'' ಎಂದುದಾಗಿ, ಗುರುಮೂರ್ತಿಯ ಧ್ಯಾನದಲ್ಲಿ ನೀನೇಯಾದೆ, ಅನ್ಯವ ಧ್ಯಾನಿಸುವ ಅಜ್ಞಾನಿ ನೀ ಕೇಳಾ. ಗುರುಪಾದಪೂಜೆಯ ಮಾಡದೆ ಅನ್ಯಪೂಜೆಯ ಮಾಡುವ ಅಧಮ ಚಾಂಡಾಲಿ ಮಾನವ ನೀ ಕೇಳಾ. ಗುರುಮಂತ್ರವ ಜಪಿಸದೆ ಅನ್ಯಮಂತ್ರವ ಜಪಿಸುವ ಅನಾಮಿಕ ಹೊಲೆಯ ನೀ ಕೇಳಾ. ಗುರುಕೃಪೆಯ ಪಡೆಯದೆ ಅನ್ಯದೈವದ ಕೃಪೆಯ ಪಡೆದೆನೆಂಬ ಪಾಪಿ ನೀ ಕೇಳಾ. ಗುರುಕರುಣ ಕೃಪೆಯ ಪಡೆದರೆ ಹರಿದು ಹೋಹುದು ನಿನ್ನ ಪೂರ್ವಜನ್ಮದ ಹೊಲೆ. ಗುರುವನರಿಯದೆ, ಲಿಂಗವನರಿಯದೆ, ಜಂಗಮವನರಿಯದೆ, ಅನ್ಯದೈವ ಕೊಟ್ಟಿತೆಂದು ಅನ್ಯವ ಹೊಗಳಿದರೆ ಎಂದೆಂದಿಗೂ ಭವಹಿಂಗದೆಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.