ಕೊಡುವಾತ ಶಿವ, ಕೊಂಬಾತ ಶಿವ, ಹುಟ್ಟಿಸುವಾತ ಶಿವ,
ಕೊಲ್ಲುವಾತ ಶಿವನೆಂಬ ದೃಷ್ಟವನರಿಯದೆ,
ನಡುಮನೆಯಲೊಂದು ದೇವರ ಜಗುಲಿಯನಿಕ್ಕಿ
ಅದರ ಮೇಲೆ ಹಲವು ಕಲ್ಲು ಕಂಚು ಬೆಳ್ಳಿ ತಾಮ್ರದ
ಪಾತ್ರೆಯನಿಟ್ಟು ಪೂಜೆ ಮಾಡಿ,
ತಲೆ, ಹೊಟ್ಟೆ, ಕಣ್ಣುಬೇನೆ ಹಲವು
ವ್ಯಾಧಿ ದಿನ ತಮ್ಮ ಕಾಡುವಾಗ
ನಮ್ಮನೆದೇವರೊಡ್ಡಿದ ಕಂಟಕವೆಂದು ಬೇಡಿಕೊಂಡು
ಹರಕೆಯ ಮಾಡಿ,
ತನ್ನ ಸವಿಸುಖವ ಕೊಂಡು ಪರಿಣಾಮಿಸಿ,
ವಿಧಿ ವಿಘ್ನ ಹೋದ ಮೇಲೆ
ಪರದೇವರು ಕಾಯಿತೆಂದು ನುಡಿವವರ
ಲೋಕದ ಗಾದೆಯ ಕಂಡು ನಾ ಬೆರಗಾದೆನೆಂದರೆ:
ಹುಟ್ಟಿಸಿದ ಶಿವ ಪರಮಾತ್ಮ ಭಕ್ಷಿಸಿಕೊಂಡೊಯ್ಯುವಾಗ
ಕಟ್ಟೆಯ ಮೇಲಣ ಕಲ್ಲು ಕಾಯುವುದೆ? ಕಾಯದಯ್ಯ.
ಮತ್ತೆ ಹೇಳುವೆ ಕೇಳಿರಣ್ಣಾ:
ಸಿರಿ ತೊಲಗಿ ದರಿದ್ರ ಎಡೆಗೊಂಡು, ಮನೆಯೊಳಿಹ
ಚಿನ್ನ ಬೆಳ್ಳಿ ತಾಮ್ರ ಕಂಚಿನ ಪ್ರತಿಮೆಯನೆಲ್ಲ ಒತ್ತೆಯ ಹಾಕಿ,
ಹಣವ ತಂದು, ಉದರವ ಹೊರೆವಗೆ ಎತ್ತ ಹೋದನಯ್ಯಾ
ಅವರ ಮನೆಯೊಳಿಹ ಮಿಥ್ಯದೈವ?
ಅಕ್ಕಸಾಲೆಯ ಮನೆಯ ಕುಪ್ಟುಟೆಯಲುರಿವುತಿಹ ಅಗ್ನಿದೇವತೆಗೆ
ಗುರಿಯಾಗಿ ಹೋದವಯ್ಯಾ.
ಸರ್ವದೇವಪಿತ ಶಂಭು[ವೆಂಬು]ದನರಿಯದೆ
ಶಿವನಿಂದ ಹುಟ್ಟಿ, ಶಿವನಿಂದ ಬೆಳೆದು, ಶಿವದೈವವ ಮರೆದು,
ಅನ್ಯದೈವವ ಹೊಗಳುವ
ಕುನ್ನಿಮಾನವರ ಕಂಡು ನಾ ಬೆರಗಾದೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.