Index   ವಚನ - 292    Search  
 
ಹಲವು ಹಡಗವಾದರೇನಯ್ಯಾ? ಸಮುದ್ರ ಒಂದೇ ನೋಡಾ! ಹಲವು ಪಕ್ಷಿ ಇದ್ದರೇನಯ್ಯಾ? ಹಾರುವ ಪವನ ಒಂದೇ ನೋಡಾ! ಹಲವು ಉಡುರಾಜರಿದ್ದರೇನಯ್ಯಾ? ಬೆಳಗಮಾಡಿ ತೋರುವ ಸೂರ್ಯ ಒಂದೇ ನೋಡಾ! ಹಲಬರಿಗೆ ಹಲವು ಗುರುರೂಪಾದ ತಾ ಪರಮಾತ್ಮ ಒಬ್ಬನೆ ನೋಡಾ! ಹಲಬರು ಕೈಯೊಳು ಬಿಲ್ಲ ಸೇರಿ ಹಲವಂಬಿಲೆಚ್ಚರದು ಎಚ್ಚಾತನ ಕೈಯೋಜೆ. ಇದಿರಿನಲ್ಲಿ ತೋರುವ ಗುರು ಒಬ್ಬನೆ ನೋಡಾ! ಹಲವು ಲಿಂಗರೂಪಾದಾತ ಶ್ರೀಪರಮಾತ್ಮ ಒಬ್ಬನೆ ನೋಡಾ! ಹಲಬರ ಕಣ್ಣಿಗೆ ಹಲವು ಜಂಗಮರೂಪಾಗಿ ತೋರುವಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ! ಹಲಬರ ಹಣೆಯಲ್ಲಿಹ ದುರ್ಲಿಖಿತಗಳ ತೊಡೆದು ಶ್ರೀ ವಿಭೂತಿಯಾಗಿ ನಿಂದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ. ಹಲಬರ ಕೊರಳಲ್ಲಿ ಶ್ರೀ ರುದ್ರಾಕ್ಷಿಯಾಗಿ ನಿಂದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ! ಹಲಬರ ಜಿಹ್ವೆಯ ಕೊನೆಯ ಮೊನೆಯಲ್ಲಿ ಶ್ರೀ ಪಂಚಾಕ್ಷರಿಯಾಗಿ ನಿಂದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ! ಹಲವು ಶಿವಭಕ್ತಜನಂಗಳಿಗೆ ಪಾದೋದಕ ಪ್ರಸಾದವಾಗಿ ಮುಕ್ತಿಯ ತೋರಿದಾತ ಶ್ರೀ ಪರಮಾತ್ಮ ಒಬ್ಬನೆ ನೋಡಾ! ಹಲಬರಿಗೆ ಹಲವು ರೂಪಾದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಪರಶಿವನೊಬ್ಬನೆ ಕಾಣಿರೋ!