Index   ವಚನ - 99    Search  
 
ಮತ್ತಮೆರಡನೆಯ ಮೂಲಪ್ರಸಾದಮೆಂತೆನೆ- ಯಗ್ನಿಮಂಡಲ ಸ್ಥಿತಿಮಾರ್ಗದೊಳಗಣ ಮೊದಲ ಸಾತ್ವಿಕವರ್ಗದಲ್ಲಿ ಪ್ರದಕ್ಷಿಣೆಯಂ ಪೂರ್ವಾದಿ ದಳನ್ಯಸ್ತ ಲಿಪಿಗಳಾರನೆಯಕ್ಕರಮಂ ಚಂದ್ರಮಂಡಲದ ಸ್ಥಿತಿಮಾರ್ಗದೆರಡನೆಯ ರಾಜಸರ್ವನ್ಯಸ್ತ ಸ್ವರಾಕ್ಷರಂಗಳ ಪದಿಮೂರನೆಯದರ ಕಡೆಯಕ್ಕರಮುಮಂ ಪಂಚಮಮಾದ ಸಾಂತದಲ್ಲಿ ಬೆರಸಿ ಹ್ರೌವೆನಿಸಿತ್ತಾ ಹ್ರೌಗೆ ಆಧಾರ ಶಕ್ತಿ ಕಾರ್ಯ ಪರ ಬಿಂದುಗಳೆಂದೈವೆಸರಾದುದು. ಸಕಾರಮಾ ಬಿಂದುವೆ ಶೂನ್ಯಮದೆ ಸೊನ್ನೆಯು. ಆ ಸೊನ್ನೆಯನೊಂದಿ ಹ್ರೌಮೆನಲೊಡಂ ಮತ್ತೊಂದು ತೆರದಿನಾಧಾರಾಧೇಯ ಶಿವಶಕ್ತಿ ಕಾರ್ಯಕಾರಣ ಪರಾಪರ ನಾದಬಿಂದುಗಳೆಂದು ಜೋಡು ಜೋಡುವೆಸರಪ್ಪುದರಿಂದೆಯುಂ ಶಕ್ತಿಯೆನೆ ಬಿಂದು, ಬಿಂದುವೆನೆ ಸೊನ್ನೆಯು. ಸೊನ್ನೆವೆರೆದು ಹ್ರೌವೆಂಬಕ್ಕರವೆ ಹ್ರೌಮೆಂದು ಶಿವಮಂತ್ರವಾಯಿತ್ತದೆ ಮೂಲಪ್ರಸಾದವೆಂದು ನಿರವಿಸಿದೆಯಯ್ಯಾ, ಪರಾತ್ಪರ ಶಿವಲಿಂಗೇಶ್ವರ.