Index   ವಚನ - 4    Search  
 
ಆತ್ಮಂಗೆ ಭೂತದಿಂದ ಕಾಬುದು ಯಂತ್ರಗುಣ ಭವಿಷ್ಯತ್ತಿನಿಂದ ಕಾಬುದು ತಂತ್ರಗುಣ, ವರ್ತಮಾನದಿಂದ ಕಾಬುದು ಮಂತಗುಣ, ಇಂತೀ ಭೂತ ಭವಿಷ್ಯದ್ವರ್ತಮಾನಂಗಳಲ್ಲಿ ಸಂಚಿತದ ಸುಖ, ಪ್ರಾರಬ್ದದ ಪ್ರಾಪ್ತಿ, ಆಗಾಮಿಯ ಕಾಂಬ ಒದಗು ಇಂತೀ ತ್ರಿವಿಧ ಆತ್ಮಂಗೆ ಫಲಭೋಗ ಪ್ರಾಪ್ತಿಯ ಕಟ್ಟುವಲ್ಲಿ ಪಿಂಡಕ್ಕೊ? ಅಂಡಕ್ಕೊ? ಉಭಯವ ಗರ್ಭೀಕರಿಸಿಕೊಂಡಿಪ್ಪ ಆತ್ಮಂಗೊ? ಎಂಬ ಸಂದೇಹವ ತಿಳಿದು. ತಿಲದೊಳಗಣ ತೈಲ, ತಿಲ ಬೆಳೆವಲ್ಲಿ ಅಡಗಿಪ್ಪ ಭೇದನರಿತು ಇಲ್ಲ ಎಂದೆಡೆಯಲ್ಲಿ ಮುಂದಣರೂಪಿನೊಳಗಿದ್ದುದ ಕಂಡು ಉಂಟೆಂದು ನಿಬದ್ದಿಸಿದಲ್ಲಿ ಫಲ ನಷ್ಟವಾಗಲಿಕ್ಕೆ ತಿಲನಷ್ಟವಾಯಿತ್ತು. ಇಂತೀ ಫಲ ಫಲಿಸುವನ್ನಕ್ಕೆ ತ್ರಿವಿಧ ಜ್ಞಾನವೆಂಬುದುಂಟು ಇದು ಅಂಡಪಿಂಡ ಜ್ಞಾನ ತ್ರಿವಿಧ ಭೇದ ಇದು ಜ್ಞಾನ ಪಿಂಡೋದಯ ಬಸವಣ್ಣಪ್ರಿಯ ಕೂಡಲ ಚೆನ್ನಸಂಗಮದೇವರಲ್ಲಿ.