Index   ವಚನ - 1    Search  
 
ನಿನ್ನ ಪರಕಾಯದಲ್ಲಿಪ್ಪ ಸದ್ಗುಣಂಗಳನು ಧರ್ಮಾಚಾರದಲ್ಲಿ ನೀ ನಡೆಸುವ ಪರಿಯೆಂತೆಂದಡೆ: ದಮೆಯೆನಿಸುವ ಸರ್ವ ಪ್ರಾಣಿಗಳಲ್ಲಿ ಲೇಸನೆ ಮಾಡುತಿರು ಕಂಡಾಯೆಂದು, ಪ್ರಿಯನೆನಿಸು ಸ್ವಪಕ್ಷ ಪರಪಕ್ಷವೆನ್ನದೆ ಸಕಲರಲ್ಲಿ ಹಿತವನೆ ಮಾಡುತಿರು ಕಂಡಾಯೆಂದು, ವಾಣಿ ನೀನು ನಯಸ್ವರವ ಕೂಡಿಕೊಂಡು ಸರ್ವ ಪ್ರಾಣಿಗಳಲ್ಲಿ ಹಿತವನೆ ನುಡಿ ಕಂಡಾಯೆಂದು, ದಮೆ ಮೇಲೆ ತಿತಿಕ್ಷೆ ಉಪರತಿ ಶಾಂತಿಗಳಿರಾ ದಾರಿದ್ರ ಸಕಲಾಪತ್ತು ಬಂದರೆ ಆರು ಬೈದಾರೆ ಹೊಯಿದರೆ ಜರೆದರೆ ನಿಂದಿಸಿದರೆ ಪರಮ ಸಂತೋಷದಲ್ಲಿ ಇರು ಕಂಡಾಯೆಂದು, ಮತಿಯ ನೀನು ಭಕ್ತಿಯ ಕೂಡಿಕೊಂಡು ಗುರು ಲಿಂಗ ಜಂಗಮ ಪಾದೋದಕ ಪ್ರಸಾದದಲ್ಲಿರಿ ಕಂಡಾಯೆಂದು, ಇಂತಿವು ಸಕಲ ಸದ್ಗುಣಂಗಳನು ಧರ್ಮಾಚಾರವೆಂಬ ಪದದಲ್ಲಿ ನೀನು ನಡೆಸುತ್ತಿದ್ದೆಯಯ್ಯ ಧರ್ಮಸ್ವರೂಪ ಬಸವಣ್ಣ