Index   ವಚನ - 7    Search  
 
ನಾಲ್ಕು ಜಾವಕ್ಕೆ ಒಂದು ಜಾವ ಹಸಿವು ತೃಷೆ ಮಿಕ್ಕಾದ ವಿಷಯದೆಣಿಕೆಗೆ ಸಂದಿತ್ತು. ಮತ್ತೊಂದು ಜಾವ ನಿದ್ರೆ, ಸ್ವಪ್ನ, ಕಳವಳ ನಾನಾ ಅವಸ್ಥೆ ಬಿಟ್ಟಿತ್ತು. ಮತ್ತೊಂದು ಜಾವ ಅಂಗನೆಯರ ಕುಚ, ಅಧರಚುಂಬನ ಮಿಕ್ಕಾದ ಬಹುವಿಧ ಅಂಗವಿಕಾರದಲ್ಲಿ ಸತ್ತಿತ್ತು. ಇನ್ನೊಂದು ಜಾವವಿದೆ: ನೀವು ನೀವು ಬಂದ ಬಟ್ಟೆಯ ತಿಳಿದು ಮುಂದಳ ಆಗುಚೇಗೆಯನರಿದು, ನಿತ್ಯನೇಮವ ವಿಸ್ತರಿಸಿಕೊಂಡು ನಿಮ್ಮ ಶಿವಾರ್ಚನೆ, ಪೂಜೆ, ಪ್ರಣವದ ಪ್ರಮಥಾಳಿ, ಭಾವದ ಬಲಿಕೆ, ವಿರಕ್ತಿಯ ಬಿಡುಗಡೆ, ಸದ್ಭಕ್ತಿಯ ಮುಕ್ತಿ, ಇಂತೀ ಕೃತ್ಯದ ಕಟ್ಟ ತಪ್ಪದಿರಿ. ಅರುಣೋದಯಕ್ಕೆ ಒಡಲಾಗದ ಮುನ್ನವೆ ಖಗವಿಹಂಗಾದಿಗಳ ಪಶುಮೃಗನರಕುಲದುಲುಹಿಂಗೆ ಮುನ್ನವೆ ಧ್ಯಾನಾರೂಢರಾಗಿ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೊಡಬಲ್ಲಡೆ.