ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನಮಪ್ಪ ಪ್ರಸಾದಂಗಳನರಿವಲ್ಲಿ,
ಆಯತ ಸ್ವಾಯತ ಸನ್ನಿಹಿತ ಸಮಯೋಚಿತ ಪ್ರಸಾದವ ಕೊಂಬಲ್ಲಿ,
ಗುರುಭಕ್ತನಾದಲ್ಲಿ ಆ ವಿವರವ ತಿಳಿಯಬೇಕು,
ಲಿಂಗಭಕ್ತನಾದಲ್ಲಿ ಆ ಗುಣವನರಿಯಬೇಕು,
ಜಂಗಮಭಕ್ತನಾದಲ್ಲಿ ಆ ಉಭಯವ ವಿವರಿಸಲಿಲ್ಲ.
ಮಹಾಪ್ರಮಥರಲ್ಲಿ ಪ್ರಸನ್ನವಾಗಲಾಗಿ ಗುರುಲಿಂಗಜಂಗಮ ಮೂರೊಂದಾಯಿತು.
ಆ ತ್ರಿವಿಧಪ್ರಸಾದವನರಿತು ಗಣಪ್ರಸಾದವ ಕೊಂಬುದು,
ಆ ಗಣ ಸ್ವಸ್ಥವಾಗಿ ಮಹಾಪ್ರಸಾದವಾಯಿತ್ತು.
ಆ ಪ್ರಸಾದವ ಕೊಂಡು ಏಲೇಶ್ವರಲಿಂಗವು ಸರ್ವಶೀಲವಂತನಾದ.