Index   ವಚನ - 99    Search  
 
ಪಾದಪೂಜೆಯೆಂಬುವುದು ಅಗಮ್ಯ-ಅಗೋಚರ- ಅಪ್ರಮಾಣ! ಶ್ರೀಗುರುಬಸವೇಶ್ವರದೇವರು ತಮ್ಮ ಅಂತರಂಗದಲ್ಲಿರ್ದ ತೀರ್ಥಪ್ರಸಾದಮಂ ಗಣಸಮೂಹಕ್ಕೆ ಸಲ್ಲಲೆಂದು ನಿರ್ಮಿಸಿ ಭಕ್ತಿ ತೊಟ್ಟು ಮೆರದರು. ಇಂತಪ್ಪ ತೀರ್ಥಪ್ರಸಾದವ ಸೇವಿಸುವ ಕ್ರಮವೆಂತೆಂದಡೆ- ಗ್ರಾಮದ ಮಠದಯ್ಯ, ಮಠಪತಿ, ಓದಿಸುವ ಜಂಗಮ, ಹಾಡುವ ಜಂಗಮ, ಆಡುವ ಜಂಗಮ, ಬಾರಿಸುವ ಜಂಗಮ, ಅಗಹೀನ, ಅನಾಚಾರಿ, ಕಂಬಿಕಾರ, ಓಲೆಕಾರನಾಗಿಹ, ವಾದಿಸುವನು, ಗರ್ವಿಸುವವನು, ಅಹಂಕಾರಿ, ದಲ್ಲಾಲ, ವೈದಿಕ, ಧನಪಾಲ, ಉದ್ಯೋಗಿ, ನಾನಾ ವಿಚಾರವ ಹೊತ್ತು, ಕಾಣಿಕಿಗೆ ಒಡೆಯರಾಗಿ ಚೆಂಗಿತನದವರು, ಪರಿಹಾಸಕದವರು, ಮರುಳು ಮಂಕುತನ ಮಾಡುವ[ವರು], ಪಟ್ಟಾಧಿಪತಿಯೆಂದೆನಿಸಿ, ಚರಮೂರ್ತಿಯೆಂದೆನಿಸಿ, ವಿರಕ್ತರೆಂದೆನಿಸಿ, ನಾಸಿ, ತೊಂಬಾಕ, ಭಂಗಿ, ಮಾಜೂಮ, ಗಂಜಿ ಅರವಿ, ಅಪು ಹೊದಿಕೆ[ಯವರು], ಹಲ್ಲುಮುರುಕ, ಉದ್ದೇಶಹೀನ, ಬೆಚ್ಚಿದವ, ಚುಚ್ಚಿದವ, ಕಚ್ಚಿದವ, ಬೆಳ್ಳಿಬಂಗಾರ ಹಲ್ಲಣಿಸಿಕೊಂಡ ಭವಿಸಂಗ, ಕರ್ಣಹೀನ, ಮೂಕ, ನಪುಂಸಕ, ವೀರಣ್ಣ, ಬಸವಣ್ಣ, ಸ್ಥಾವರದೈವಂಗಳಿಗೆ ತೀರ್ಥಕುಡುವ, ಉಡಕಿ, ಸೋಹಿ ಬಯಲಾದ ಜಂಗಮಕ್ಕೆ ಕಟಕಟೆಯಿಟ್ಟು ಹಾವಿಗೆಯಿಟ್ಟು ಧೂಳತಿಟ್ಟು ಗೊರವನಂತೆ ಪೂಜೆ ಮಾಡಿಸುವ- ಇಂತಿಷ್ಟು ಅಜ್ಞಾನಿಜಂಗಮರಲ್ಲಿ ಪಾದೋದಕ ಪ್ರಸಾದವ ಕೊಳಲಾಗದು! ಅಥವಾ ಕೊಂಡಡೆ ಕೊಟ್ಟಾತಂಗೆ ದೋಷ, ಕೊಂಡಾತಂಗೆ ಪಾಪ! ತ್ರಿನೇತ್ರವಿರ್ದಡು ಕೊಳಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.