Index   ವಚನ - 6    Search  
 
ಬಯಲೊಳಗಣ ರೂಪು, ರೂಪಿನೊಳಗಣ ಬಯಲು ಉಭಯವ ವಿಚಾರಿಸಿ ನೋಡುವಲ್ಲಿ ಕುಂಭದೊಳಗೆ ನೀರ ತುಂಬಿ, ಸಿಂಧುವಿನೊಳಗೆ ಮುಳುಗಿಸಲಾಗಿ ಅದರೊಳಗೂ ನೀರು, ಹೊರಗೂ ನೀರು. ಹೊರಗಣ ನೀರು ಒಳಗಾಯಿತ್ತು, ಒಳಗಣ ನೀರು ಹೊರಗಾಯಿತ್ತು. ಕುಂಭದೊಳಗಣ ನೀರು ಅಂಗಕ್ಕೊ ಒಳಗೊ ಹೊರಗೊ ಎಂಬುದು ತಿಳಿಯದು. ಅಂಗದ ಮೇಲಿಹ ಲಿಂಗ, ಲಿಂಗವ ಧರಿಸಿದ ಅಂಗ ಅರಿವಿನ ಕುರುಹಿಂಗೆ ಒಳಗೊ ಹೊರಗೊ ಎಂಬುದ ವಿಚಾರಿಸಿ ಕರ್ಪೂರದ ಹಾಗೊಲೆಯಲಿ ಮೃತ್ತಿಕೆಯ ಕುಂಭವನಿರಿಸಿ ಕಿಚ್ಚಹಾಕಿ ಓಗರವನಡಲಿಕ್ಕಾಗಿ ಒಲೆ ಉರಿಯದ ಮುನ್ನವೆ ಓಗರ ಬೆಂದು ಕರ್ಪೂರದ ಹಾಗೆ ಒಲೆಯೊಳಗೆ ಉಭಯ ಬಯಲಾಗಿ ಮಡಕೆ ಉಳಿಯಿತ್ತದೇತಕ್ಕೆ? ಘಟ ಉಳಿದು ಆತ್ಮ ಬಯಲಾಯಿತದೇತಕ್ಕೆ? ಉಭಯ ನಿರತವಾದಲ್ಲಿ ಉರಿಯಿಂದ ಕರ್ಪೂರ ನಷ್ಪವಾದ, ಕರ್ಪೂರದಿಂದ ಉರಿ ನಷ್ಟವಾದಂತೆ ಇಂತೀ ಉಭಯಸ್ಥಲದೊಳಗು ಅಂಗಲಿಂಗ ಪ್ರಾಣಲಿಂಗ ಉಭಯವನೊಂದು ಮಾಡಿ ತಿಳಿದು ನಿಜದಲ್ಲಿ ನಿಂದ ಲಿಂಗಾಂಗಿಗೆ ಕೂಗಿನ ಕುಲವಿಲ್ಲ ಮಹಾಮಹಿಮ ಮಾರೇಶ್ವರಾ.