ಎಲಾ, ಶಿವಪೂಜೆಯ ಮಾಡುವ ಶಿವಪೂಜಕರು ನೀವು ಕೇಳಿರಯ್ಯಾ;
ನಿಮ್ಮ ಶಿವಪೂಜೆ[ಯ]ವಿಧ ಯಾವುದೆಲಾ?
ಜಲದಿಂದ ಮಜ್ಜನವ ನೀಡುವಿರಿ;
ಜಲ ಮೀನಿನೆಂಜಲು.
ಅಡವಿಯಂ ತಿರುಗಿ, ಪುಷ್ಪವಂ ತಂದು,
ಶಿವಗಂ ಅರ್ಪಿ[ಸುವಿರಿ];
ಪುಷ್ಪ ಭೃಂಗದೆಂಜಲು.
ಪಂಚಾಭಿಷೇಕ[ವ]ಮಾಡುವಿರಿ;
ಕ್ಷೀರ ಕರುವಿನೆಂಜಲು.
ಮಧು[ವ] ಅಭಿಷೇಕವ ಮಾಡುವಿರಿ;
[ಮಧು] ಮಧು[ಕ]ರಮಯಂ.
[ಇಂ]ತೀ ನೈವೇದ್ಯವಂ ಮಾಡುವೆಯಲ್ಲದೆ
ಶಿವಪೂಜೆಯ ವಿಧವ ಬಲ್ಲೆ ಏನಯ್ಯಾ?
ಅದು ಎಂತೆಂದಡೆ:
ಮಾನಸ ಪೂ[ಜಕ]ಸ್ಯ ಸರ್ವಪಾಪಃ [ಪರಿಹರತಿ] |
ಸಾ[ಮೀ]ಪ್ಯ[ಂ] ಸದ್ಗು[ರೋಃ] ಪ್ರಾ[ಪ್ಯ] ಪುನರ್ಭವ ವಿನಶ್ಯತಿ ||
ಇಂತೀ ಆಗಮ ಗ್ರಂಥವುಂಟಲ್ಲಾ ಇದನ್ನರಿತು
ಮಾನಸವೆಂಬೋ ಕಲ್ಲಿನ ಮೇಲೆ
ಮದಮಚ್ಚರವೆಂಬೋ ಗಂಧ ಕೊರಡಿನಿಂದ ತೇಯ್ದು,
ಸತ್ಯವೆಂಬೋ ಗಂಧವಂ ಹಚ್ಚಿ,
ನಿತ್ಯತ್ವ ಎಂಬೋ ಅಕ್ಷತೆಯನಿಟ್ಟು,
ಗುರುಕೀಲೆಂಬೋ ಒರಳಿನಲ್ಲಿ
ಮದಮಚ್ಚರವೆಂಬೋ ತಂಡಿಲಂ ಕುಟ್ಟಿ,
ಬುದ್ಧಿಯೆಂಬೋ ಮೊರದಿಂದ ಝಾಡಿಸಿ ಕೇರಿ,
ನಿಜವೆಂಬೋ ಅನ್ನವಂ ಮಾಡಿ,
ನಿರ್ಮಳ ಚಿತ್ತವೆಂಬೋ ತುಪ್ಪವಂ ನೀಡಿ,
ನಿರುಪಮ ಅವಸ್ಥೆಗಳಿಂದ ನೈವೇದ್ಯವಂ ಕೊಟ್ಟು,
ಕಾಮಕ್ರೋಧವೆಂಬೋ ಬತ್ತಿಯ ಹೊಸೆದು,
ಗುರುಪ್ರಣುತವೆಂಬೋ ಪಣತಿಯೊಳಗೆ
ನಿರ್ಮಳವೆಂಬೋ ತೈಲವಂ ಎರೆದು
ಜ್ಯೋತಿಯ ಮುಟ್ಟಿಸಿ,
ನಿರ್ಮಳ ಲಿಂಗಕ್ಕಂ ಅರ್ಪಿಸಿ
ಮೋಕ್ಷವ ಕಂಡಡೆ
ಶಿವಪೂಜಕನೆಂದು ನಮೋ ಎಂಬುವೆನಯ್ಯಾ
ಬರಿದೆ 'ನಾ ಶಿವಪೂಜೆ' 'ನೀ ಶಿವಪೂಜಕ'ನೆಂದು ತಿರುಗುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ
ಕೂಡಲಾದಿ ಚನ್ನಸಂಗಮದೇವಾ
Art
Manuscript
Music
Courtesy:
Transliteration
Elā, śivapūjeya māḍuva śivapūjakaru nīvu kēḷirayyā;
nim'ma śivapūje[ya]vidha yāvudelā?
Jaladinda majjanava nīḍuviri;
jala mīninen̄jalu.
Aḍaviyaṁ tirugi, puṣpavaṁ tandu,
śivagaṁ arpi[suviri];
puṣpa bhr̥ṅgaden̄jalu.
Pan̄cābhiṣēka[va]māḍuviri;
kṣīra karuvinen̄jalu.
Madhu[va] abhiṣēkava māḍuviri;
[madhu] madhu[ka]ramayaṁ.
[Iṁ]tī naivēdyavaṁ māḍuveyallade
śivapūjeya vidhava balle ēnayyā?
Adu entendaḍe:
Mānasa pū[jaka]sya sarvapāpaḥ [pariharati] |
sā[mī]pya[ṁ] sadgu[rōḥ] prā[pya] punarbhava vinaśyati ||Intī āgama granthavuṇṭallā idannaritu
mānasavembō kallina mēle
madamaccaravembō gandha koraḍininda tēydu,
satyavembō gandhavaṁ hacci,
nityatva embō akṣateyaniṭṭu,
gurukīlembō oraḷinalli
madamaccaravembō taṇḍilaṁ kuṭṭi,
bud'dhiyembō moradinda jhāḍisi kēri,
nijavembō annavaṁ māḍi,
nirmaḷa cittavembō tuppavaṁ nīḍi,
nirupama avasthegaḷinda naivēdyavaṁ koṭṭu,
kāmakrōdhavembō battiya hosedu,
gurupraṇutavembō paṇatiyoḷage
nirmaḷavembō tailavaṁ eredu
Jyōtiya muṭṭisi,
nirmaḷa liṅgakkaṁ arpisi
mōkṣava kaṇḍaḍe
śivapūjakanendu namō embuvenayyā
baride'nā śivapūje' 'nī śivapūjaka'nendu tiruguva
mūḷa holeyara mukhava nōḍalāgadu kāṇā
kūḍalādi cannasaṅgamadēvā