Index   ವಚನ - 3    Search  
 
ಲಿಂಗಾರ್ಚನೆಯ ಮಾಡುವಾಗ ಪಾದಪೂಜೆಯ ಮಾಡುವಾಗ ಪಾದೋದಕ ಪ್ರಸಾದ ಕೊಂಬುವಾಗ ಭವಿಶಬ್ದ ಕುಶಬ್ದ ಹಿಂಸಾಶಬ್ದ ಹೊಲೆಶಬ್ದ ಹುಸಿಶಬ್ದ ಹೇಸಿಕೆಶಬ್ದ ವಾಕರಿಕೆಶಬ್ದ ಇವೆಲ್ಲವ ಪ್ರಸಾದಿಗಳು ವರ್ಜಿಸುವುದು. ವರ್ಜಿಸದಿರ್ದಡೆ, ಲಿಂಗಾರ್ಚನೆ ಪಾದಪೂಜೆ ಪಾದೋದಕ ಪ್ರಸಾದ ನಿಷ್ಫಲ. ಸಾಕ್ಷಿ : "ಭವಿಶಬ್ದಂ ಕುಶಬ್ದಂ ಚ ಹಿಂಸಾಶಬ್ದಂ ಸತಾಪಕಂ | ಶ್ವಪಚಾsನೃತಶಬ್ದಂ ಚ ಕರ್ಕಶೋ ಭಾಂಡಿಕೋಪಿ ವಾ | ಬೀಭತ್ಸಕಂ ಮಹಾದೇವಿ ಪ್ರಸಾದಂ ಚ ವಿವರ್ಜಯೇತ್ ||" ಎಂದುದಾಗಿ, ಪ್ರಸಾದ ಮುಗಿಯುವತನಕ ಭೋಜ್ಯ ಭೋಜ್ಯಕ್ಕೆ ಪಂಚಾಕ್ಷರಿಯ ಸ್ಮರಿಸುತ್ತ ಸಲಿಸುವುದು. ಶಿವಸ್ಮರಣೆಯಿಂದ ಸ್ವೀಕರಿಸಿದ್ದು ಮುನ್ನೂರರುವತ್ತು ವ್ಯಾಧಿ ನಿಲ್ಲದೆ ಓಡುವವು. ಹೀಗೆ ನಂಬಿಗೆಯುಳ್ಳಡೆ ಪ್ರಸಾದಸಿದ್ಧಿಯಪ್ಪುದು ನೋಡಾ ! ನಮ್ಮ ಬಿಬ್ಬಬಾಚಯ್ಯನವರು ನಂಬಿದ ಕಾರಣದಿಂದ ಓಗರ ಪ್ರಸಾದವಾಗಿ, ಎಂಜಲವೆಂದ ವಿಪ್ರರ ಮಂಡೆಯಮೇಲೆ ತಳೆಯಲು ಕೆಂಡವಾಗಿ ಸುಟ್ಟುದಿಲ್ಲವೆ ಗ್ರಾಮಸಹಿತವಾಗಿ ? ಮತ್ತೆ, ಮರುಳಶಂಕರದೇವರು ಪ್ರಸಾದದ ಕುಂಡದೊಳಗೆ ಹನ್ನೆರಡು ವರ್ಷವಿದ್ದು ನಿಜೈಕ್ಯವಾದುದಿಲ್ಲವೆ ? ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ ಕರ್ಮದ ಫಲವು ; ನಂಬಿದವರಿಗಿಂಬಾಗಿಪ್ಪನು ನಮ್ಮ ಶಾಂತಕೂಡಸಂಗಮದೇವ