Index   ವಚನ - 4    Search  
 
ಪ್ರಸಾದಿ ಪ್ರಸಾದಿಗಳೆಂದು ನುಡಿದುಕೊಂಡು ನಡೆಯಬಹುದಲ್ಲದೆ ಪ್ರಸಾದವ ಕೊಂಬ ಭೇದವನರಿಯರು. ಕರುಣಿಸು ಮದ್ಗುರವೆ, ಕೇಳಯ್ಯ ಮಗನೆ : ಗುರುವಿನಲ್ಲಿ ತನುವಂಚನೆಯಿಲ್ಲದೆ ಕೊಂಬುದು ಶುದ್ಧಪ್ರಸಾದ ; ಲಿಂಗದಲ್ಲಿ ಮನವಂಚನೆಯಿಲ್ಲದೆ ಕೊಂಬುದು ಸಿದ್ಧಪ್ರಸಾದ ; ಜಂಗಮದಲ್ಲಿ ಧನವಂಚನೆಯಿಲ್ಲದೆ ಕೊಂಬುದು ಪ್ರಸಿದ್ಧಪ್ರಸಾದ. ಈ ತ್ರಿವಿಧಲಿಂಗದಲ್ಲಿ ತ್ರಿವಿಧ ವಂಚನೆಯಿಲ್ಲದೆ ಅವರ ಕರುಣಪ್ರಸಾದವ ಕೊಂಬ ಪ್ರಸಾದಕಾಯಕ್ಕೆ ಪ್ರಳಯಬಾಧೆಗಳು ಬಾಧಿಸಲಮ್ಮವು ; ಕರಿ ಉರಗ ವೃಶ್ಚಿಕ-ಇವು ಹೊದ್ದಲಮ್ಮವು; ಇರುವೆ ಕೆಂಡವು ಹೊದ್ದಲಮ್ಮವು. ಹೊದ್ದುವ ಪರಿ ಎಂತೆಂದೊಡೆ: ಲಿಂಗದಲ್ಲಿ ನಿಷ್ಠೆಯಿಲ್ಲ ; ಜಂಗಮದಲ್ಲಿ ಪ್ರೇಮ-ಭಕ್ತಿಯಿಲ್ಲ; ವಿಭೂತಿ - ರುದ್ರಾಕ್ಷೆಯಲ್ಲಿ ವಿಶ್ವಾಸವಿಲ್ಲ; ಶಿವಾಚಾರದಲ್ಲಿ ದೃಢವಿಲ್ಲದ ಕಾರಣ ತಾಪತ್ರಯಂಗಳು ಕಾಡುವವು ಎಂದಿರಿ ಸ್ವಾಮಿ, 'ಮತ್ತೆ ನಂಬುಗೆಯುಳ್ಳ ಪ್ರಸಾದಿಗಳಿಗೆ ವ್ಯಾಧಿಯೇಕೆ ಕಾಡುವವು? ಸದ್ಗುರುಮೂರ್ತಿಯೆ ಕರುಣಿಸು ಎನ್ನ ತಂದೆ'. ಕೇಳೈ ಮಗನೆ: ಭಕ್ತಗಣಂಗಳಿಗೆ ವಂದಿಸಿ ನಿಂದಿಸಿ ಹಾಸ್ಯ ದೂಷಣವ ಮಾಡಿದಡೆ ಅದೇ ವ್ಯಾಧಿರೂಪಾಗಿ ಕಾಡುವದು; ತಲೆಶೂಲೆ ಹೊಟ್ಟೆಶೂಲೆ ನಾನಾತರದ ಬೇನೆಯಾಗಿ ಕಾಡುವವು. ಆ ಭಕ್ತಗಣಂಗಳಿಗೆ ತಾನು ನಿಂದಿಸಿದುದ ತಿಳಿದು, ಅವರಿಗೆ ತ್ರಿಕರಣಶುದ್ಧವಾಗಿ ಸೇವೆಯ ಮಾಡಿ, ಅವರ ಕರುಣವ ಹಡೆದಡೆ ಆಗ ಅವರಿಗೆ ವ್ಯಾಧಿ ಬಿಟ್ಟು ಹೋಗುವವು ಎಂದಾತ ನಮ್ಮ ಶಾಂತಕೂಡಲಸಂಗಮದೇವ