ಅಂದಿನವರಿಗೆ ಅಷ್ಟಾವರಣವು ಸಾಧ್ಯವಪ್ಪುದಲ್ಲದೆ
ಇಂದಿನವರಿಗೆ ಅಷ್ಟಾವರಣವು ಸಾಧ್ಯವಾಗದೆಂಬರು.
ಅದೇನು ಕಾರಣ ಸಾಧ್ಯವಿಲ್ಲ ಶ್ರೀಗುರುವೆ?
ಅಂದಿನ ಸೂರ್ಯ ಚಂದ್ರ ಆತ್ಮ ಆಕಾಶ ವಾಯು
ಅಗ್ನಿ ಅಪ್ಪು ಪೃಥ್ವಿ ಎಂಬ ಅಷ್ಟತನುಮೂರ್ತಿಗಳು
ಅಂದುಂಟು ಇಂದುಂಟು.
ಅಂದು ಬೆಳೆವ ಹದಿನೆಂಟು ಜೀನಸಿನ ಧಾನ್ಯಗಳು
ಇಂದು ಬಿತ್ತಿದರೆ ಬೆಳೆವವು.
ಅಂದು ವಾರ ತಿಥಿ ನಕ್ಷತ್ರ ಸಂವತ್ಸರಗಳು ನಡೆದುದುಂಟು.
ಇಂದು ವಾರ ತಿಥಿ ನಕ್ಷತ್ರ ಸಂವತ್ಸರಗಳು ನಡೆವುದುಂಟು.
ಅಂದಿನ ಅಷ್ಟಾವರಣಸ್ವರೂಪ ಇಂದುಂಟು.
ಅಂದು ಇಂದೆಂಬ ಸಂದೇಹದ ಕೀಲವ ಕಳೆದು ನಿಂದರೆ ಸಾಕು
ದಯಮಾಡು ಸದ್ಗುರುವೆ.
ಕೇಳೈ ಮಗನೆ :
ದೃಢವಿಡಿದು ಏಕಚಿತ್ತದಲ್ಲಿ ನಂಬಿಗೆಯುಳ್ಳ
ಶಿವಭಕ್ತಂಗೆ ಅಂದೇನು, ಇಂದೇನು?
ಗುರುಲಿಂಗಜಂಗಮದಲ್ಲಿ ಪ್ರೇಮ ಭಕ್ತಿ ಇದ್ದವರಿಗೆ,
ವಿಭೂತಿ ರುದ್ರಾಕ್ಷಿಯಲ್ಲಿ ವಿಶ್ವಾಸ ಇದ್ದವರಿಗೆ,
ಶಿವಮಂತ್ರವಲ್ಲದೆ ಎನಗೆ ಬೇರೆ ಮಂತ್ರವಿಲ್ಲವೆಂಬವರಿಗೆ
ಅಂದೇನೊ, ಇಂದೇನೊ?
ಗುರುಲಿಂಗಜಂಗಮಕ್ಕೋಸ್ಕರವಾಗಿ ಕಾಯಕ ಮಾಡುವವರಿಗೆ
ಪಂಚಾಚಾರವೇ ಪ್ರಾಣವಾಗಿ, ಅಷ್ಟಾವರಣವೇ ಅಂಗವಾಗಿಪ್ಪವರಿಗೆ
ಅಂದೇನೊ, ಇಂದೇನೊ?
ಪುರಾತರ ವಚನವಿಡಿದು ಆರಾಧಿಸುವವರಿಗೆ,
ಆದಿ ಮಧ್ಯ ಅವಸಾನ ತಿಳಿದವರಿಗೆ,
ಅಂದು ಇಂದೆಂಬ ಸಂದೇಹವಿಲ್ಲವೆಂದು ಹೇಳಿದಿರಿ ಸ್ವಾಮಿ
ಎನ್ನಲ್ಲಿ ನೋಡಿದರೆ ಹುರಿಳಿಲ್ಲ, ಹುರುಳಿಲ್ಲ.
ಎನ್ನ ತಪ್ಪಿಂಗೇನೂ ಎಣೆಯಿಲ್ಲ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ.
ಮೇರುಗುಣವನರಸುವುದೆ ಕಾಗೆಯಲ್ಲಿ?
ಪರುಷಗುಣವನರಸುವುದೆ ಕಬ್ಬುನದಲ್ಲಿ?
ನೀವು ಎನ್ನ ಗುಣವನರಸಿದರೆ ಎಂತು ಜೀವಿಸುವೆನಯ್ಯಾ,
ಶಾಂತಕೂಡಲಸಂಗಮದೇವ,
ನಿಮ್ಮ ಧರ್ಮ, ನಿಮ್ಮ ಧರ್ಮ.