Index   ವಚನ - 18    Search  
 
ಓಂಕಾರ ನಾದವು ಪಿಂಡಬ್ರಹ್ಮಾಂಡ ತುಂಬಿಕೊಂಡಿಪ್ಪುದು. ಮಹಾಜ್ಞಾನಿಗಳಿಗೆ ಪ್ರತ್ಯಕ್ಷವಾಗಿಪ್ಪುದು. ಆ ನಾದವಿಲ್ಲದಿರ್ದಡೆ ನಿರ್ಜೀವಿಗಳು ಹೇಗೆ ನುಡಿವವು? ನಿರ್ಜೀವಿ ಯಾವು ಯಾವುವೆಂದಡೆ: ಕಡುವಿಡಿದ ಶಬ್ದ - ಚರ್ಮವಿದ್ಯೆ ಭೇರಿ ತಮ್ಮಟ; ಲೋಹವಿಡಿದ ಶಬ್ದ - ತಾಳ ಕಂಸಾಳ ಗಂಟೆ ಕಾಳೆ ಕರ್ನೆ ಸಪೂರಿ ಸನಾಯಿ; ತಂತಿವಿಡಿದ ಶಬ್ದ - ಕಿನ್ನರಿ ವೀಣೆ ಕಾಮಾಕ್ಷಿ ತಂಬೂರಿ ರುದ್ರವೀಣೆ. ಇನ್ನು ಆಕಾಶದೊಳಗೆ ಶಬ್ದವನಿಕ್ಕಿದಡೆ ಪ್ರತಿಶಬ್ದವ ಕೊಡುವುದು. ದೇಗುಲದೊಳಗೆ ಹೇಗೆ ನುಡಿದಡೆ ಹಾಗೆ ನುಡಿವುದು. ಪರಿಪೂರ್ಣವಸ್ತುವಿಲ್ಲದಿರ್ದಡೆ ಈ ನಿರ್ಜೀವಿಗಳು ಹೇಗೆ ನುಡಿವವು? ಈ ನಾದ ಶಬ್ದವು ಆವಾವ ಘಟದೊಳಗೆ ಹೊಕ್ಕು, ಆ ಘಟಶಬ್ದವ ಕೊಡುತ್ತಿಹುದು ಆ ಘಟದ ಗುಣವೆಂದು ತಿಳಿವುದು. ನಮ್ಮ ಗಣಂಗಳು ಆ ಘಟದ ಗುಣಮಂ ಬಿಟ್ಟು ಪಿಂಡಬ್ರಹ್ಮಾಂಡದೊಳಗಿಪ್ಪ ಪರಿಪೂರ್ಣ ವಸ್ತುವಿನೊಳಗೆ ಬೆರೆದುದ ಎನ್ನೊಳರುಹಿದಾತ ನಮ್ಮ ಶಾಂತಕೂಡಲಸಂಗಮದೇವ