ಗುರುಭಕ್ತರು ವಾರ ತಿಥಿ ನಕ್ಷತ್ರ ವ್ಯತಿಪಾತ
ಯೋಗ ಕರಣ ಶುಭಾಶುಭವ ನೋಡಲಾಗದು, ಕೇಳಲಾಗದು.
ಅವರ ಮನೆಯಲ್ಲಿ ಬಾಲರಂಡೆ ಇಪ್ಪ ಕಾರಣ ಕೇಳಲಾಗದು.
ವಾರ ತಿಥಿ ನಕ್ಷತ್ರ ಆರೈದು ಕೇಳಿದವರಿಗೆ ಗುರುವಿಲ್ಲ, ಶಿವನಿಲ್ಲ.
ಅವರಿಗೆ ವಾರಗಳೇ ದೈವವಾಗಿಪ್ಪವು.
ಇದಕ್ಕೆ ದೃಷ್ಟಾಂತ:
ವಸಿಷ್ಠ ಮುನಿ ರಾಮ ಲಕ್ಷ್ಮಣರಿಗೆ ಒಳ್ಳೆ ಶುಭವೇಳೆಯ
ಲಗ್ನವ ನೋಡಿ ತೆಗೆದುಕೊಟ್ಟನು.
ಲಗ್ನವಾದ ಮೇಲೆ ಹೆಂಡತಿ ಸೀತೆಯನ್ನು ರಾವಣನೇಕೆ ಒಯ್ದ?
ಮತ್ತೆ ಅವರು ದೇಶತ್ಯಾಗಿಯಾಗಿ ವನವಾಸವೇಕೆ ಹೋದರು?
ಸಾಕ್ಷಿ:
"ಕರ್ಮಣಾಂ ಹಿ ಪ್ರಧಾನತ್ವಂ ಕಿಂ ಕರೋತಿ ಶುಭಗ್ರಹಃ |
ವಸಿಷ್ಠಾದಿ ಕೃತೇ ಲಗ್ನೇ ರಾಮಃ ಕಿಂ ಭ್ರಮತೇ ವನಂ||"
ಎಂದುದಾಗಿ,
ಈ ನಡತೆ ಭಕ್ತಗಣಂಗಳಿಗೆ ಸಮ್ಮತವಲ್ಲ.
ಸಮ್ಮತ ಹೇಗೆಂದಡೆ :
ಮದುವೆಯ ಮಾಡುವಲ್ಲಿ, ಊರು ಕೇರಿಗೆ ಹೋಗುವಲ್ಲಿ,
ಪ್ರಸ್ಥವ ಮಾಡುವಲ್ಲಿ, ಕೆರೆ ಬಾವಿ ಅಗಿಸುವಲ್ಲಿ,
ಸಮಸ್ತ ಕಾರ್ಯಕ್ಕೆ ಗುರುಲಿಂಗಜಂಗಮ ಭಕ್ತಗಣಂಗಳ ಕೇಳಿ,
ಅವರು ಹೇಳಿದ ಹಾಗೆ ಕೇಳಿ ಅಪ್ಪಣೆಯ ತಕ್ಕೊಂಡು
ಸಮಸ್ತ ಕಾರ್ಯವ ಮಾಡುವುದು.
ಹೀಗೆ ನಂಬಿದವರಿಗೆ ಸಿದ್ಧಿಯಾಗುವುದು.
ಅದು ಹೇಗೆಂದಡೆ :
ನಕ್ಷತ್ರಫಲವ ಕೇಳಿಹೆನೆಂದಡೆ,
ನಮ್ಮ ಗಣಂಗಳಾದ ರಾಜೇಂದ್ರಜೋಳ,
ಚೇರಮರಾಯ, ಸೌಂದರ ಪಾಂಡ್ಯ
ಈ ಮೂವರ ಸೀಮೆಯ ಮೇಲೆ ಮಳೆ ಬೀಳದಿದ್ದಡೆ
ಆಗ ಮೂವರು ಕೂಡಿ ಸ್ವರ್ಗಕ್ಕೆ ಹೋಗಿ
ಆ ಇಪ್ಪತ್ತೇಳು ನಕ್ಷತ್ರಗಳ ಮುಂಗೈ ಕಟ್ಟಿ
ತಮ್ಮ ಊರಿಗೆ ತಂದು
ಸೆರೆಮನೆಯೊಳಗೆ ಹಾಕಿದುದ ಜಗವೆಲ್ಲ ಬಲ್ಲುದು.
ಅಂದಿನ ಗಣಂಗಳು ಇಂದಿದ್ದಾರೆಂದು ನಂಬಿದವರಿಗೆ
ಬೇಡಿದ್ದನೀವ ನಮ್ಮ ಶಾಂತಕೂಡಲಸಂಗಮದೇವ