ಅಂದಿನವರಿಗೆ ಪರುಷವಿಪ್ಪುದು
ಇಂದಿನವರಿಗೆ ಪರುಷವೇಕಿಲ್ಲ?
ದಯದಿಂದ ಕರುಣಿಸಿ ಸ್ವಾಮಿ.
ಕೇಳಯ್ಯ ಮಗನೆ :
ಲಾಂಛನಧಾರಿಗಳು ಸ್ವಯಪಾಕ ಭಿಕ್ಷಕ್ಕೆ ಬಂದ ವೇಳೆಯಲ್ಲಿ
ಗೋದಿಯ ಬೀಸುವಗೆ ಆ ಹಿಟ್ಟು ಬಿಟ್ಟು
ಕಡೆಯಲಿದ್ದ ಹಿಟ್ಟು ನೀಡುವವರಿಗೆ ಎಲ್ಲಿಹುದೊ ಪರುಷ?
ಲಾಂಛನಧಾರಿಗಳು ಧಾನ್ಯ ಭಿಕ್ಷಕ್ಕೆ ಬಂದಡೆ
ಘನವ ಮಾಡಿಕೊಳ್ಳಿರಿ ಎಂಬವರಿಗೆ ಎಲ್ಲಿಹುದೊ ಪರುಷ?
ಶಿವಯೋಗಿ ಲಿಂಗಾರ್ಪಿತ ಭಿಕ್ಷಕ್ಕೆ ಬಂದಡೆ ಸುಮ್ಮನಿಹರು.
ಇದು ಭಿಕ್ಷವೇಳೆಯೆ ? ಎಂಬವರಿಗೆ ಎಲ್ಲಿಹುದೊ ಪರುಷ?
ಮತ್ತಂ, ಹಬ್ಬವ ಮಾಡುವಾಗ ಭಿಕ್ಷಕ್ಕೆ ಬಂದಡೆ
ತಂಗಳ ನೀಡಿ ಕಳಿಸುವವರಿಗೆ ಎಲ್ಲಿಹುದೊ ಪರುಷ?
ಪರುಷ ಎಲ್ಲಿಹುದು ಎಂದಡೆ :
ಜಂಗಮವು ಮನೆಗೆ ಬಂದಡೆ ಬಂದ ಬರವ, ನಿಂದ ನಿಲವ
ಅರಿತವರಿಗೆ ಅದೇ ಪರುಷ.
ಯಾವ ವೇಳೆಯಾಗಲಿ, ಯಾವ ಹೊತ್ತಾಗಲಿ
ಜಂಗಮವು ಭಿಕ್ಷಕ್ಕೆ ಬರಲು
ಹಿಂದಕ್ಕೆ ತಿರುಗಗೊಡ[ದ]ವರನ್ನೆಲ್ಲ
ಸುಖವಬಡಿಸುವುದೇ ಪರುಷ.
ಸಮಸ್ತ ಒಡವೆಯೆಲ್ಲವನು
ಎನ್ನ ಒಡವೆಯಲ್ಲವೆಂದವರಲ್ಲಿ ಅದೇ ಪರುಷ.
ತನ್ನ ಪ್ರಪಂಚಿನ ಪುತ್ರ ಮಿತ್ರ ಕಳತ್ರರಿಗೆ ಮಾಡುವ ಹಾಗೆ
ಗುರು-ಲಿಂಗ-ಜಂಗಮಕ್ಕೆ, ಕೇವಲ ಸದ್ಭಕ್ತಿಗೆ
ಭಕ್ತಿಯ ಮಾಡಿದವರಿಗೆ ಅದೇ ಪರುಷ.
ಹೀಗೆ ಮಾಡಿದವರಿಗೆ ಅಂದೇನು ಇಂದೇನು
ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ