Index   ವಚನ - 35    Search  
 
ಧ್ಯಾನ ಧಾರಣ ಸಮಾಧಿಯೆಂತೆಂದಡೆ ಸದ್ಗುರುವೆ ಕರುಣಿಪುದು. ಕೇಳಯ್ಯ ಮಗನೆ : ಧ್ಯಾನ ಯೋಗವೆಂತೆಂದಡೆ : ಷಡಾಧಾರಚಕ್ರದೊಳಗೆ ಆಧಾರ ಮೊದಲಾಗಿ ಆಜ್ಞೆ ಕಡೆತನಕ ಇಷ್ಟಲಿಂಗವ ಧ್ಯಾನಿಸಿ ಅರ್ಚಿಸಿ ಪೂಜಿಸಿ ಅಲ್ಲಿ ತ್ರಿಕೂಟ ಸಂಗಮದಲ್ಲಿ ಗಂಗಾ ಯಮುನಾ ಸರಸ್ವತಿ ನದಿಗಳು ಕೂಡಿದ ಠಾವಿನಲ್ಲಿ ಪ್ರಮಥಗಣಂಗಳು ಮೊದಲಾಗಿ ಅಲ್ಲಿ ಮಜ್ಜನವ ನೀಡುತ್ತಿಹರು. ಅಲ್ಲಿ ಸೂರ್ಯಪೀಠದ ಮೇಲೆ ಗುರುವು ಮೂರ್ತವ ಮಾಡಿರಲು ಅವರ ಪಾದಾರ್ಚನೆಯಂ ಮಾಡಿ, ಪಾದೋದಕದ ನದಿಗಳಲ್ಲಿ ಸ್ನಾನವ ಮಾಡಿ ಅವರ ಸಂಗಡ ಏಳನೆಯ ಮಂಟಪಕ್ಕೆ ಹೋಗಿ ಅಲ್ಲಿ ಪಶ್ಚಿಮಚಕ್ರದಿಂದ ನಿರಂಜನಜಂಗಮವು ಶಿಖಾಚಕ್ರದಲ್ಲಿರ್ದ ಬಸವಾದಿ ಪ್ರಮಥರು ಮೊದಲಾದವರು ಬಿಜಯಮಾಡಿ, ಅಲ್ಲಿ ಅಸಂಖ್ಯಾತ ಪ್ರಮಥರು, ನೂತನ ಗಣಂಗಳು ಸಹವಾಗಿ ಲಿಂಗಾರ್ಚನೆಯ ಮಾಡುತ್ತಿಹರು. ಆ ಲಿಂಗಾರ್ಚನೆ ಎಂತೆಂದಡೆ : ಮೊದಲು ಚಿದ್ಭಸ್ಮವನೆ ಧರಿಸಿ, ಆನಂದೋದಕದಿಂದ ಲಿಂಗಕ್ಕೆ ಕ್ರಿಯಾಮಜ್ಜನವ ನೀಡಿ, ಅಷ್ಟತನುವಿನ ಅಷ್ಟಸುಗಂಧವ ಧರಿಸಿ, ಕರಣಂಗಳ ಸಂಚಲವಿಲ್ಲದ ಗುಣತ್ರಯದಕ್ಷತೆಯ ಧರಿಸಿ, ಸಾವಿರದೈವತ್ತು ಪ್ರಣವದ ಪರಿಮಳ ತುಂಬಿರ್ದ ಪುಷ್ಪವ ಧರಿಸಿ, ದಶವಾಯುಗಳ ಗುಣಧರ್ಮಂಗಳ ಜ್ಞಾನಾಗ್ನಿಯೊಳು ನೀಡಿ, ದಶಾಂಗದ ಸದ್ವಾಸನೆಯ ಧೂಪವ ಧರಿಸಿ, ಹೃದಯವೆಂಬ ಪ್ರಣತಿಯಲ್ಲಿ ದೃಢಚಿತ್ತವೆಂಬ ಬತ್ತಿಯನಿರಿಸಿ, ಅರುಹೆಂಬ ತೈಲವನೆರದು, ಮಹಾಜ್ಞಾನವೆಂಬ ಜ್ಯೋತಿಯ ಮುಟ್ಟಿಸಿ ಅದರಿಂದೊದಗಿದ ಏಕಾರತಿ ತ್ರಿಯಾರತಿ ಪಂಚಾರತಿ ಕಡ್ಡಿ ಬತ್ತಿ ಮೊದಲಾದ ಮಹಾಪ್ರಕಾಶದ ದೀಪವ ಧರಿಸಿ, ಕ್ರಿಯಾ ಜ್ಞಾನ ಇಚ್ಫಾ ಆದಿ ಪರ ಚಿತ್‍ಶಕ್ತಿ ಮೊದಲಾದವರು ಆರತಿಯ ಪಿಡಿದಿಹರು. ಆ ಮೇಲೆ ಪಾದತೀರ್ಥವ ಸಲಿಸಿ, ಮತ್ತೆ ಐವತ್ತು ದಳದಲ್ಲಿರ್ದ ಐವತ್ತು ರುದ್ರಕನ್ನಿಕೆಯರು ಅಡುಗೆಯ ಮಾಡಿ, ಅವರಿಗೆ ಇಚ್ಫಾಪದಾರ್ಥವ ನೀಡುತ್ತಿಹರು. ಅವರ ಒಕ್ಕುಮಿಕ್ಕ ಪ್ರಸಾದವನುಂಡು ಫಲದಾಕಾಂಕ್ಷೆಗಳಿಲ್ಲದೆ ಉಲುಹಡಗಿದ ನಿಜ ಪ್ರಭಾಲತೆ ಪರ್ಣದ ವೀಳ್ಯವನಿತ್ತು ಅವರ ತಾಂಬೂಲ ಪ್ರಸಾದವ ಕೊಂಡು ಪರಿಣಾಮಿಸಿ ಮನ ಭಾವಂಗಳಿಂದ ಪ್ರತ್ಯಕ್ಷವಾಗಿ ಕಂಡು, ಧ್ಯಾನಿಸುವುದೇ ಧ್ಯಾನ ಯೋಗ. ಇನ್ನು ಧಾರಣಯೋಗದ ವಿವರ : ಕರದೊಳಗೆ ಇಷ್ಟಲಿಂಗವ ಮೂರ್ತವ ಮಾಡಿಸಿ ಮನದೊಳಗೆ ಪ್ರಾಣಲಿಂಗವ ಮೂರ್ತವ ಮಾಡಿಸಿ ಭಾವದೊಳಗೆ ತೃಪ್ತಿಲಿಂಗವ ಮೂರ್ತವ ಮಾಡಿಸಿ ಕರ ಮನ ಭಾವದೊಳಗೆ ಪ್ರತ್ಯಕ್ಷವಾಗಿ ಕಂಡು ಧರಿಸಿಕೊಂಡಿಪ್ಪುದೀಗ ಧಾರಣಯೋಗ. ಇನ್ನು ಸಮಾಧಿಯೋಗದ ವಿವರ : ಆ ಇಷ್ಟ ಪ್ರಾಣ ಭಾವಲಿಂಗವ ಏಕವ ಮಾಡಿ, ಅಲ್ಲಿ ಐಕ್ಯವಾಗಿಪ್ಪುದೀಗ ಸಮಾಧಿಯೋಗ ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ