ಲಿಂಗದೊಳಗೆ ಅಖಿಳಾಂಡಕೋಟಿ ಬ್ರಹ್ಮಾಂಡಗಳಡಗಿಹವು.
ಲಿಂಗವು ತಾನು ಬ್ರಹ್ಮಾಂಡದೊಳಡಗಿ
ಆ ಬ್ರಹ್ಮಾಂಡವು ಲಿಂಗವು ತನ್ನೊಳಡಗಿದ ಭೇದವು
ಶಾಸ್ತ್ರವ ಬಲ್ಲವರಿಗೆ ಕಾಣಿಸದು,
ಆಗಮಯುಕ್ತರಿಗೆ ತಿಳಿಯದು ;
ಕರ್ಮ ಭೂಭಾರಿಗಳಿಗೆ ಸಲ್ಲದು.
ಇದನ್ನು ಭಕ್ತಗಣಂಗಳಿಗೆ ಗುರು ಪ್ರತ್ಯಕ್ಷಮಂ ಮಾಡಿ
ತೋರಿಸಿದ ಭೇದವು ಎಂತೆಂದಡೆ :
ಕರಿ ಕನ್ನಡಿಯೊಳಡಗಿದ ಹಾಗೆ ;
ಮುಗಿಲ ಮರೆಯ ಸೂರ್ಯನ ಹಾಗೆ
ನೇತ್ರದ ಕೊನೆಯೊಳಗೆ ಆಕಾಶವಡಗಿದ ಹಾಗೆ,
ನೆಲದ ಮರೆಯ ನಿಧಾನದ ಹಾಗೆ
ಬೀಜದೊಳಡಗಿದ ವೃಕ್ಷದ ಹಾಗೆ.
ಈ ಭೇದವು ಗುರುಭಕ್ತರಂಶಿಕರಾದವರಿಗೆ ಸಾಧ್ಯವಲ್ಲದೆ
ಉಳಿದ ಭಿನ್ನ ಜ್ಞಾನಿಗಳೆತ್ತ ಬಲ್ಲರು ಎಂದಾತ
ನಮ್ಮ ಶಾಂತಕೂಡಲಸಂಗಮದೇವ.