Index   ವಚನ - 37    Search  
 
ನಿರಾಕಾರ ಪರವಸ್ತು ಹೇಗೆಂದಡೆ : ಹೆಣ್ಣಲ್ಲ ಗಂಡಲ್ಲ, ಬೀಜವಲ್ಲ ವೃಕ್ಷವಲ್ಲ, ಆಕಾರವಲ್ಲ ನಿರಾಕಾರವಲ್ಲ, ಸ್ವೇತವಲ್ಲ ಪೀತವಲ್ಲ, ಹರಿತವಲ್ಲ ಮಾಂಜಿಷ್ಟವಲ್ಲ, ಕಪೋತವಲ್ಲ, ಮಾಣಿಕ್ಯವಲ್ಲ. ಆತನು ವರ್ಣಾತೀತನು, ವಾಙ್ಮನಕ್ಕಗೋಚರನು. ಇಂತಪ್ಪ ವಸ್ತುವಿನೊಳಗೆ ಬೆರೆವ ಪರಿಯೆಂತೆಂದಡೆ : ಗುರುವಿನ ವಾಕ್ಯವಿಡಿದು ಆಚರಿಸಿದವನು ಐಕ್ಯನು. ಹೇಗೆಂದಡೆ : ಎಲೆಯಿಲ್ಲದ ವೃಕ್ಷದಂತೆ, ಸಮುದ್ರದೊಳಗೆ ನೊರೆ ತೆರೆ ಬುದ್ಬುದಾಕಾರ ಅಡಗಿದ ಹಾಗೆ ಭಕ್ತನು ಮಹೇಶ್ವರನೊಳಡಗಿ, ಆ ಮಹೇಶ್ವರನು ಪ್ರಸಾದಿಯೊಳಡಗಿ, ಆ ಪ್ರಸಾದಿಯು ಪ್ರಾಣಲಿಂಗಿಯೊಳಡಗಿ, ಆ ಪ್ರಾಣಲಿಂಗಿಯು ಶರಣನೊಳಡಗಿ, ಆ ಶರಣ ಐಕ್ಯನೊಳಡಗಿ, ಆ ಐಕ್ಯನು ನಿರವಯದೊಳು ಕೂಡಿ ಕ್ಷೀರವು ಕ್ಷೀರವ ಕೂಡಿದಂತೆ ನೀರು ನೀರ ಕೂಡಿದಂತೆ ಜ್ಯೋತಿ ಜ್ಯೋತಿಯ ಕೂಡಿದಂತೆ ಬಯಲು ಬಯಲ ಕೂಡಿ ಚಿದ್ಬಯಲುವಾಗಿ ನಿಂದ ನಿಲವ ಲಿಂಗದೊಳರುಹಿ ಮೂವತ್ತಾರುಲಿಂಗದ ಮುಖದಿಂದಾದ ಮೂವತ್ತಾರು ವಚನವ ಓದಿದವರು ಕೇಳಿದವರು ಸದ್ಯೋನ್ಮುಕ್ತರಪ್ಪುದು ತಪ್ಪದು ಎಂದಾತ ನಮ್ಮ ಶಾಂತಕೂಡಲಸಂಗಮದೇವ