ಬ್ರಹ್ಮದೇವರಾದಡೆ ಬ್ರಹ್ಮನವಾಹನ ಹಂಸ
ಹಂಸನಲ್ಲಿ ಹರ[ಗಿ] ಬೆಳದುಂಡನೆ?
ವಿಷ್ಣು ದೇವರಾದಡೆ ವಿಷ್ಣುವಿನ ವಾಹನ ಗರುಡ
ಗರುಡನಲ್ಲಿ ಹರ[ಗಿ] ಬೆಳದುಂಡನೆ?
ಇಂದ್ರ ದೇವರಾದಡೆ ಇಂದ್ರನ ವಾಹನ ಆನೆ
ಆನೆಯಲ್ಲಿ ಬಿತ್ತಿ ಬೆಳದುಂಡನೆ?
ಮೈಲಾರ ದೇವರಾದಡೆ ಮೈಲಾರನ ವಾಹನ ಕುದುರೆ
ಕುದುರೆಯಲ್ಲಿ ಬಿತ್ತಿ ಬೆಳದುಂಡನೆ?
ಜಿನ್ನ ದೇವರಾದಡೆ ಮೈಲಾರನ ವಾಹನ ಕುದುರೆ
ಕುದುರೆಯಲ್ಲಿ ಬಿತ್ತಿ ಬೆಳದುಂಡನೆ?
ಜಿನ್ನ ದೇವರಾದಡೆ ಜಿನನ ವಾಹನ ಕತ್ತೆ
ಕತ್ತೆಯಲ್ಲಿ ಬಿತ್ತಿ ಬೆಳದುಂಡನೆ ?
ಭೈರವ ದೇವರಾದಡೆ ಭೈರವನ ವಾಹನ ಚೇಳು
ಚೇಳಿನಲ್ಲಿ ಬಿತ್ತಿ ಬೆಳದುಂಡನೆ
ಗಣೇಶ್ವರ ದೇವರಾದಡೆ ಗಣೇಶ್ವರನ ವಾಹನ ಇಲಿ
ಇಲಿಯಲ್ಲಿ ಬಿತ್ತಿ ಬೆಳದುಂಡನೆ?
ದೇವರಲ್ಲವೆನಲಾರೆನು ಮತ್ತೆ ದೇವರೆಂಬುದು ಸತ್ಯ ಅದೆಂತಂದಡೆ
ಗಣೇಶಗೆ ಈಶ್ವರನ ಹೆಸರುಂಟು,
ಅದು ಹೇಗೆ ಗಣೇಶ್ವರ?
ಮತ್ತೆ ಅದೆಲ್ಲದೆ ಪಾರ್ವತಿಗೆ ಮೋಹದ ಕುಮಾರ.
ಅದಲ್ಲದೆ ಜಿತೆಂದ್ರಿ. ಸರ್ವಜಗಕೆ
ವಿದ್ಯೆ ಬುದ್ದಿಯಂ ಕೊಡುವನು, ಅದರಿಂದ ಸತ್ಯನು.
ಓಂಕಾರ ವಸ್ತುವೆ ಸಾಕ್ಷಿಯಾಗಿ ಮತ್ತಂ
ನಮ್ಮ ಸದಾಶಿವನ ವಾಹನ ಬಸವಣ್ಣ
ಬಸವಣ್ಣನ ಬಿರಿದೆಂತೆಂದರೆ
ಸಪ್ತಸಮುದ್ರ ಜಲಪ್ರಳಯಕ್ಕೆ ಹೆಪ್ಪಕೊಟ್ಟ
ಕಾರುಣ್ಯದಲ್ಲಿ ಎತ್ತೆಂಬ ಶಬ್ಧಾಯಿತ್ತು.
ಎತ್ತ ನೋಡಿದಡತ್ತ
ತನ್ನಲಿಂದುತ್ಪತ್ಯವಾಯಿತೆಂಬ ಶಬ್ದವೆತ್ತಾಯಿತ್ತು.
ತನ್ನಿಂದ ಹರಗಿ ಬಿತ್ತಿ ಬೆಳೆಯಲಿಕೆ
ಪವಿತ್ರ ಸ್ವಾಮಿಗೆ ನೈವೇದ್ಯವಾಯಿತ್ತು.
ಹಸ್ತಪುರುಷವ ಮಾಡಲಿಕೆ
ಘನವರುಷ ಪ್ರಸಾದವಾಯಿತ್ತು.
ಹಸ್ತಪುರುಷ ಪ್ರಸಾದವಾಯಿತ್ತು
ಇಂತಿರ್ದ ನಮ್ಮ ಬಸವನ ಪ್ರಸಾದವನುಂಡು
ನನ್ನ ದೇವರು ಹೆಚ್ಚು ತನ್ನ ದೇವರು ಹೆಚ್ಚು ಎಂದು
ಕಚ್ಚಾಡುವ ಕುನ್ನಿ ಮೂಕೊರೆ ಮೂಳ ಹೊಲೆಯರಿಗೆ
ಏನೆಂಬೆನಯ್ಯಾ ಗುರು ವಿಶ್ವೇಶ್ವರಾ.