Index   ವಚನ - 58    Search  
 
ಅಯ್ಯಾ, ಒಂದು ಅನಾದಿ ಮೂಲಪ್ರಣಮವೆ ಸಾಕಾರಲೀಲೆಯಧರಿಸಿ, ಚಿದಂಗ-ಚಿದ್ಘನಲಿಂಗವಾಗಿ, ಆ ಒಂದಂಗ-ಲಿಂಗವೆ ತ್ರಿವಿಧಾಂಗ ತ್ರಿವಿಧಲಿಂಗವಾಗಿ, ಆ ತ್ರಿವಿಧಲಿಂಗಾಂಗವೆ ಷಡ್ವಿಧಲಿಂಗಾಂಗವಾಗಿ, ಆ ಷಡ್ವಿಧಲಿಂಗಾಂಗವೆ ಛತ್ತೀಸಲಿಂಗಾಂಗವಾಗಿ, ಆ ಛತ್ತೀಸ ಲಿಂಗಂಗಳನೆ ಶ್ರದ್ಧಾದಿ ಛತ್ತೀಸಭಕ್ತಿಗಳಲ್ಲಿ ಕೂಟವ ಮಾಡಿ, ಇಂತು ಲಿಂಗಾಂಗ ಭಕ್ತಿಗಳನೆ ಸತ್ಕ್ರಿಯಾ, ಸಮ್ಯಜ್ಞಾನ, ಸತ್ಕಾಯಕ, ಸತ್ಪಾತ್ರಭಿಕ್ಷದಲ್ಲಿ ಸಮರಸವ ಮಾಡಿ, ಆ ಮಹಾಜ್ಞಾನವ ಸಾಧಿಸಿ, ಆ ಮಹಾಜ್ಞಾನದ ಬಲದಿಂದ ಪೃಥ್ವೀತತ್ವಸಂಬಂಧವಾದ ಕರ್ಮೇಂದ್ರಿಯಂಗಳು, ಅಪ್ಪುತತ್ವಸಂಬಂಧವಾದ ಜ್ಞಾನೇಂದ್ರಿಯಂಗಳು, ಅಗ್ನಿತತ್ವಸಂಬಂಧವಾದ ವಿಷಯಂಗಳು. ವಾಯುತತ್ವಸಂಬಂಧವಾದ ಪ್ರಾಣವಾಯುಗಳು, ಆಕಾಶತತ್ವಸಂಬಂಧವಾದ ಕರಣಂಗಳು, ಭಾನುತತ್ವಸಂಬಂಧವಾದ ಉದರವೆಂಬ ಭೂತಂಗಳು, ಶಶಿತತ್ವಸಂಬಂಧವಾದ ಶ್ವೇತವರ್ಣ ಮೊದಲಾದ ವರ್ಣಂಗಳು, ಆತ್ಮತತ್ವಸಂಬಂಧವಾದ ಸಮಸ್ತನಾದಂಗಳು ಇಂತು ಸಮಸ್ತತತ್ವಂಗಳು ಕೂಡಲಾಗಿ ನಾಲ್ವತ್ತುತತ್ವವೆನಿಸುವವು. ಈ ತತ್ವಂಗಳ ಶಿವತತ್ವ, ಅನಾದಿ ಶಿವತತ್ವ, ಅನಾದಿನಿಷ್ಕಲ ಪರಶಿವತತ್ವ, ಅನಾದಿ ನಿಷ್ಕಲಪರಾತ್ಪರ ಶಿವತತ್ವವೆಂಬ, ಚತುರ್ವಿಧ ತತ್ವಸ್ವರೂಪ ಗುರು-ಲಿಂಗ-ಜಂಗಮ-ಪ್ರಸಾದವ ಕೂಡಿಸಿ, ಆ ಮಹಾಜ್ಞಾನದಿಂ ನೋಡಿದಲ್ಲಿ ನಾಲ್ವತ್ತುನಾಲ್ಕು ತತ್ವಸ್ವರೂಪಿನಿಂದ ಒಂದು ಚಿದಂಗವೆನಿಸುವುದಯ್ಯ. ಆ ಚಿದಂಗದ ಷಟ್ಚಕ್ರಂಗಳಲ್ಲಿ ಶ್ರೀಗುರುಲಿಂಗಜಂಗಮ ಕೃಪೆಯಿಂದ ಮೂರ್ತಿಗೊಂಡಿರುವ ಐವತ್ತಾರು ಪ್ರಣಮಂಗಳೆ ಸಾಕಾರಲೀಲೆಯಧರಿಸಿ, ನವಕೃತಿಸಂಬಂಧವಾದ ಅನಾದಿಮೂಲಪ್ರಣಮವ ಕೂಡಿ ಏಕಸ್ವರೂಪಿನಿಂದ ಐವತ್ತೇಳುಲಿಂಗಸ್ವರೂಪಪ್ರಣಮವನೊಳಕೊಂಡು ಒಂದು ಚಿದ್ಘನಲಿಂಗವೆನಿಸುವುದಯ್ಯ. ಇಂತು ಅಂಗಲಿಂಗವೆಂಬ ನೂರೊಂದು ಸ್ಥಲಕುಳಂಗಳ ವಿಚಾರಿಸಿ, ಶರಣರೂಪಿನಿಂದ ತನ್ನಾದಿ ಮಧ್ಯಾವಸಾನವ ತಿಳಿದು, ಕರ್ತುಭೃತ್ಯತ್ವದ ಸದ್ಭಕ್ತಿಯ ವಿಚಾರವನರಿದು, ದ್ವಾದಶಾಚಾರದ ವರ್ಮವನರಿದು, ಕರ್ತುಭೃತ್ಯತ್ವಾಚಾರ ಸದ್ಭಕ್ತಿಯೆಂಬ ನಿಜಸಮಾಧಿಯಲ್ಲಿ ನಿಂದು, ನಿರವಯಲ ಕೂಡುವಂಥಾದೆ ತತ್ತ್ವದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಜಚೈತನ್ಯಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.