Index   ವಚನ - 14    Search  
 
ಈಶ್ವರಂಗೆ ಗುಹೇಶ್ವರದೇವರು ಹೇಳುತಿರ್ದ, ಸಾಕ್ಷಿ : ಶ್ಲೋಕ-ಏಕವೃಕ್ಷ ತವೇ ವರ್ಣಥೌ ನವೇ ಫಲ ಸೇವಿತಂ | ಮುಖ ಪದ್ಮದೃಷ್ಟಂ ದೇವ ಸರ್ವಪಾಪಂ ವಿನಶ್ಯತಿ (?) || ಇನ್ನು ಈಶ್ವರ ಲಿಂಗಾರ್ಪಿತವಂ ಮಾಡಬೇಕೆಂದು ಕೇಳಲು ಹೇಳಿದ ಪ್ರಸ್ತಾವದ ವಚನ : ಷಡುವರ್ಗವೆಂಬ ಸಮ್ಮಾರ್ಜನೆಯಂ ಮಾಡಿ, ಅಷ್ಟಮದಂಗಳ ಹಿಟ್ಟುಗುಟ್ಟಿ ರಂಗವಾಲಿಯನಿಕ್ಕಿ, ಸಪ್ತವ್ಯಸನಂಗಳೆಂಬ ಉಪಕರಣಂಗಳ ಲಿಂಗಸೋಹಕ್ಕೆ ತಂದು, ತನುವೆಂಬ ಅಟ್ಟಣೆಯಲ್ಲಿ ಮನವೆಂಬ ಹಸ್ತದಿಂದ ಮಜ್ಜನಕ್ಕೆರೆದು ಮೂಲಗುಂಡಿಗೆಯೊಳಗಣ ಜ್ಯೋತಿಯನೆಬ್ಬಿಸಿ ಸಗುಣವೆಂಬ ಶ್ರೀಗಂಧವನಿಟ್ಟು, ಪ್ರಣಮಮೂಲವೆಂಬ ಅಕ್ಷತೆಯ ಧರಿಸಿ ಅಷ್ಟದಳದಲ್ಲಿ ಪೂಜೆಯ ಮಾಡಿ, ಸುಖಸದ್ವ್ಯಸನವೆಂಬ ಧೂಪವನ್ನು ಅಳವಡಿಸಿ ಪಂಚತತ್ವಗಳೆಂಬ ಪಂಚಾರತಿಯ ಬೆಳಗಿ ಸುಷುಮ್ನವೆಂಬ ಹರಿವಾಣದಲ್ಲಿ ಪರಮಭೋಜನವೆಂಬ ಬೋನವಂ ಗಡಣಿಸಿ, ಸರ್ವಶುದ್ಧವೆಂಬ ತುಪ್ಪವಂ ನೀಡಿ, ನಿರ್ಮಳಾತ್ಮಕವೆಂಬ ಬೆಳ್ಳಿಯ ನಿರ್ಮಿಸಿ, ಶುಚಿರ್ಭೂತವೆಂಬ ಹಸ್ತದಲ್ಲಿ ಮಹಾಲಿಂಗಕ್ಕೆ ನೈವೇದ್ಯವಂ ಕೊಟ್ಟು ಅರಿವು ಮರವೆಂಬ ಅಡಕೆಯನೊಡದು, ಶತಶಾಂತವೆಂಬ ಎಲೆಯಂ ಕೊಯಿದು, ನಿರ್ಗುಣವೆಂಬ ಸುಣ್ಣವಂ ನೀಡಿ, ಲಿಂಗಾರ್ಪಿತವಂ ಮಾಡಿ, ಪ್ರಸಾದವ ಸವಿವ ಲಿಂಗಾರ್ಚಕರ ಚರಣವ ತೋರಿ ಎನ್ನ ಸಲಹಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ