Index   ವಚನ - 31    Search  
 
ಗುರುಲಿಂಗ ಉಪದೇಶ ಲಿಂಗಧಾರಣವೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳು ನೀವು ಕೇಳಿರೊ. ಸರ್ವಾಂಗಭೇದವನು ಕಮಲಪ್ರಕಾಶವನರಿದು ನುಡಿವಿರಿ. ಪದ್ಮಸ್ಥಾನದಲ್ಲಿ ಕಮಲಕ್ಕೆ ನಾಲ್ಕು ಎಸಳು, ಅದಕ್ಕೆ ಶ್ವೇತ ಕಪೋತ ಹರಿತ ಮಾಂಜಿಷ್ಟ ನೀಲವರ್ಣವೆಂಬಿರಿ. ಈ ನಾಲ್ಕರ ಭೇದವ ಬಲ್ಲರೆ ಭಕ್ತನೆಂದೆನಿಸಬಹುದು. ಈ ನಾಲ್ಕು ಎಸಳನು ಒಂದುಮಾಡಿ ಅದರೊಳು ಕೂಡಬಲ್ಲರೆ ಮಾಹೇಶ್ವರನೆಂದೆನಿಸಬಹುದು. ಪೃಥ್ವಿ ಅಪ್ಪುವಿನ ಗುಣಂಗಳನಳಿದು ದಶಕಮಲದಲ್ಲಿ ಬೆರೆಸಬಲ್ಲರೆ ಪ್ರಸಾದಿಯೆಂದೆನಿಸಬಹುದು. ಈ ತ್ರಿವಿಧ ಗುಣಂಗಳ ಶಕ್ತಿಯ ನಿಲ್ಲಿಸಿ ಅಂತರಂಗದ ಹೃದಯಕಮಲದಿ ನಿಂತಿಹ ರಾಜನ ಸಂದರುಶನವ ಮಾಡಿ, ಮನ ಬುದ್ಧಿ ವಿತ್ತ ಅಹಂಕಾರವೆಂಬ ಚತುರ್ವಿಧ ಪ್ರಧಾನಿಗಳ ಬುದ್ಧಿಯ ಮೀರಿ ಹದಿನಾರು ಎಸಳಲ್ಲಿ ನಿಂದು, ಆಕಾಶ ತತ್ವವ ನಿರೀಕ್ಷಿಸಿ ಪಂಚತತ್ವದ ಪರಿಯ ನೋಡುತ್ತ ಬಂದು, ಆಮುಂದಿರ್ದ ಮುಪ್ಪುರದ ಹೆಬ್ಬಾಗಿಲ ಪೊಕ್ಕು ಶ್ರೀ ಗುರುವಿನ ಶ್ರೀಪಾದವೆಂಬ ಉಭಯಕಮಲವ ನಿರೀಕ್ಷಣವ ಮಾಡಿ, ಶ್ರೀಗುರುವಿನ ಶ್ರೀಪಾದಪದ್ಮಕಾರುಣ್ಯ ಜ್ಞಾನವ ಪಡದು, ಮುಂದೆ ನೋಡಲಾಗಿ ಸಹಸ್ರದಳದ ಕಮಲವ ಕಂಡೆನಯ್ಯ. ಆ ಕಮಲದ ಅಗ್ರದ ತುದಿಯಲ್ಲಿ ಇರುವ ಲಿಂಗವ ಕಂಡು ತನ್ನ ಸಂಬಂಧವಾಗಬೇಕೆಂದು ಮೇಲಕ್ಕೆ ನೋಡಲು ಏಕದಳದ ಪದ್ಮವ ಕಂಡೆನಯ್ಯ. ಆ ಪದ್ಮ ಸಿಂಹಾಸನದ ಮೇಲೆ ನಿರಂಜನನೆಂಬ ಜಂಗಮವ ಕಂಡೆ. ಆ ಜಂಗಮದ ಚರಣಾಂಬುಜಕ್ಕೆ ಎರಗಿದ ಕಾರಣ ಆ ಚಿತ್ಕಳೆಯೆಂಬ ಲಿಂಗ ಎನ್ನ ಸಂಬಂಧವಾಯಿತ್ತಲ್ಲಯ್ಯ. ಇಂತೆಸವಂಗಭೇದವನರಿಯದೆ ಉಪದೇಶವೆಂದು ನುಡಿವ ನರಗುರಿಗಳ ನೋಡಿ ನಗುವ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.