Index   ವಚನ - 3    Search  
 
ಕ್ಷಮೆ ದಮೆ ಶಾಂತಿ ಸೈರಣೆ ಭಕ್ತಿ ಜ್ಞಾನ ವೈರಾಗ್ಯಸಂಪನ್ನರಾದ ವೀರಮಾಹೇಶ್ವರರು, ಜಗದ್ಧಿತಾರ್ಥವಾಗಿ ಮರ್ತ್ಯಲೋಕದೊಳು ಬಂದು, ನಡೆನಡೆಗೆ ನುಡಿನುಡಿಗೆ ಅಡಿಗಡಿಗೆ ಹೆಜ್ಜೆಹೆಜ್ಜೆಗೆ 'ಓಂ ನಮಃ ಶಿವಾಯ, ಓಂ ನಮಃ ಶಿವಾಯ ಓಂ ನಮಃ ಶಿವಾಯ'- ಎಂಬ ಮಂತ್ರಮೂರ್ತಿಗಳಾಗಿ, ಲಿಂಗದ ನೆನಹಿಂದ ಲಿಂಗಾರ್ಪಿತಕ್ಕೆ ಹೋಗಿ, ನಿಂದು 'ಲಿಂಗಾರ್ಪಿತ ಭಿಕ್ಷಾ' ಎಂದಲ್ಲಿ, ಗುರುವಾಜ್ಞೆಯಿಂದ ಬಂದ ಭಿಕ್ಷ ಅಮೃತಾನ್ನವೆಂದು ಕೈಕೊಂಡು ಭೋಜ್ಯ ಭೋಜ್ಯಗೆ 'ಓಂ ನಮಃ ಶಿವಾಯ, ಓಂ ನಮಃ ಶಿವಾಯ ಓಂ ನಮಃ ಶಿವಾಯ' ಎಂಬ ನುಡಿಯಿಂದ ಸೇವಿಸಿ, ನಿತ್ಯತೃಪ್ತರಾಗಿ, ಸುಳುಹು ಪಾವನರಾಗಿ ಚರಿಸುವ ಮಹಾಮಹಿಮ ಶರಣರ ನಡೆ ಪರುಷ, ನುಡಿ ಪರುಷ, ಮುಟ್ಟಿದ್ದು, ನೋಡಿ ಸೋಂಕಿದ್ದೆಲ್ಲಾ ಪಾವನ, ಹಾದ ಜಲವೆಲ್ಲ ಪುಣ್ಯತೀರ್ಥ, ಏರಿದ ಬೆಟ್ಟವೆಲ್ಲ ಶ್ರೀಪರ್ವತಂಗಳಾದವು. ಇಂತಪ್ಪ ನಿರಾಳ ನಿಜೈಕ್ಯ ನಿರಾಮಯ ನಿರ್ದೇಹಿಗಳಾದ ಶರಣರ ಅರೆಪಾದ ಧೂಮ್ರ ಮಲಿನವಾಗಿರುವಂತೆ ಮಾಡಯ್ಯ. [ಕೇಟೇಶ್ವರಲಿಂಗದಲ್ಲಿ] ಧನ್ಯ ನಾನಯ್ಯ.