Index   ವಚನ - 1    Search  
 
ಭೂಲೋಕದ ನಚ್ಚನೆ ಮೀರಿ ನಿಶ್ಚಟನಾಗಿ ಜ್ಞಾನ ಕ್ರೀಗಳಿಂದ ಆಚರಿಸಿ ಅಂಗಲಿಂಗ ಸಂಬಂಧಿಗಳಾದ ಶಿವಲಿಂಗ ಮೋಹಿಗಳು ಕೇಳಿರಯ್ಯ. ಶರಣರು ಮುಕ್ತಿಪುರಕ್ಕೆ ಹೋಗುವ ಹಾದಿಯಲ್ಲಿ ಒಂದು ಪಂಚವರ್ಣದ ಹಣ್ಣು, ಮನವೇಟದ ಮಹಾಪಟ್ಟಣವೊಂದು. ಆ ಪಟ್ಟಣದ ಕಡೆ ಮೊದಲಾಗಿಯೂ ಹಾಳಾಗಿಪ್ಪುದು. ಆ ಪಟ್ಟಣದ ನಡುವೆ ಹೋಗುತ್ತಿಪ್ಪ ಹಾದಿಯಲ್ಲಿ ಅಹಂಕಾರ ಮಮಕಾರಗಳೆರಡು ಪಟ್ಟಣಗಳು ತುಂಬಿ ತುಳುಕುತವೆ. ಆ ಎರಡು ಪಟ್ಟಣಕ್ಕೆ ಹೋಹಾದಿ ಹೆಬ್ಬೆಟ್ಟಗಳಾಗಿಪ್ಪವು. ಆ ಎರಡು ಪಟ್ಟಣದ ದಿಕ್ಕಿನಲ್ಲಿ ಒಂದು ಭಕ್ತಿಯ ಪುರವಿದೆ. ಆ ಭಕ್ತಿ ಪುರಕ್ಕೆ ಹಾದಿಯಿಲ್ಲ. ಆ ಭಕ್ತಿಪುರಕ್ಕೆ ಹೋದಲ್ಲದೆ ಮುಂದಳ ಮುಕ್ತಿಪುರದ ಬಟ್ಟೆ ಕಾಣಬಾರದು. ಮುಂದಳ ಪಯಣ ಗತಿಯ ಸಂಚದೋವರಿಯ ಸಂಚಮಾಕರಣ ಮನ ಎಂಬತ್ತು ನಾಲ್ಕು ಲಕ್ಷದ ಪ್ರಕಾರದಲ್ಲಿಪ್ಪರಾ ಮಂಡಲದಲ್ಲಿ ಸುಳಿವುದು ತಪ್ಪದೆಂದು ಅದಕ್ಕೆ ಹೇಹಮಂ ಮಾಡಿ, ತಮ್ಮವರು ಹೋದ ನಸುದೋಯಲ (?) ಬೆಂಬಳಿವಿಡಿದು ಹೋಗಿ ಭಕ್ತಿಪುರಮಂ ಕಂಡು ಆ ಭಕ್ತಿಪುರದಿ ನಡುವೆ ಹೋಗುತ್ತಿದ್ದ ಹಾದಿಯಲ್ಲಿ ಹೆಬ್ಬುಲಿ ಕರಡಿ ಕಾಳರಕ್ಕಸಿ ಕರಿಘಟೆಯಿಪ್ಪ ಮಹಾಸರೋವರದ ಅರಣ್ಯವಿದೆ. ಆ ಸರೋವರದ ಅರಣ್ಯಮಧ್ಯದಲ್ಲಿ ಎಂಟು ಕಳಸದ ಚೌಕಮಂಟಪದ ಸುವರ್ಣದ ದೇಗುಲವಿದೆ. ಆ ದೇಗುಲದಲ್ಲಿ ಮುಕ್ತಿರಾಜ್ಯಕ್ಕೆ ಪಟ್ಟವಕಟ್ಟುವ ಸಮರ್ಥಿಕೆಯನ್ನುಳ್ಳ ಜಂಗಮಲಿಂಗವದೆ. ಆ ಲಿಂಗಜಂಗಮಂ ಶರಣ ಕಂಡು ಹರ್ಷಗೊಂಡ ಭಾವದಲ್ಲಿ ಷೋಡಶೋಪಚಾರ ಅಷ್ಟವಿಧಾರ್ಚನೆಗಳಿಂದ ಪೂಜೆಯಂ ಮಾಡಿ ತನ್ನ ಮನದ ಅಭೀಷ್ಟೆಯಂ ಮನ ನೆನದಂತೆ ಮನದಲ್ಲಿ ಭೇದಿಸಿ ದೇಹ ಮನ ಪ್ರಾಣಕುಳ ಸಮಸ್ತ ಶರಣಾದಿಗಳ ಗುಣಕಂಗಳೆಲ್ಲವೂ ಸುಟ್ಟು ಬೊಟ್ಟಿಕ್ಕಿ ನಿರ್ಮಲದ ರೂಪನಾಗಿ ಅಲ್ಲಿಂದ ಮುಂದೆ ನಡೆಸುತ್ತಿದ್ದಾಗ ಉತ್ತರ ದಿಕ್ಕಿನ ಆಕಾಶದಲ್ಲಿ ಅನೇಕ ಚೋದ್ಯವನೊಳಕೊಂಡಿಪ್ಪ ತ್ರಿಪುರಮಂ ಕಂಡು, ಆ ತ್ರಿಪುರದ ಮೇಲೆ ಬ್ರಹ್ಮರಂಧ್ರವೆಂಬ ಕೈಲಾಸದ ಕಡೆಯ ಬಾಗಿಲೊಳಿಪ್ಪ ಐಕ್ಯಸ್ಥಲವೆನಿಸುವ ಅಣುನೆಲೆಯ ಮಾಣಿಕ್ಯವರ್ಣದ ಉಪ್ಪರಿಗೆಯ ತಳಮಂ ಕಂಡು ಪತಿಯಿದ್ದ ಮನೆಯ ಬಾಗಿಲ ಸತಿಸಾರುವಂತೆ ಶರಣ ಉಪ್ಪರಿಗೆಯ ಬಾಗಿಲಂ ಸಾರಿ ಬಾಗಿಲಲ್ಲಿ ಡಾಕಿಣಿ, ರಾಕಿಣಿ, ಲಾಕಿಣಿ, ಕಾಕಿಣಿ, ಸಾಕಿಣಿ, ಹಾಕಿಣಿಯರೆಂಬ ಪಡ್ವಿಧಶಕ್ತಿಗಳಿಗೆ ಆದಿನಾಯಕಿಯಾಗಿಪ್ಪಳು. ಅರ್ಧಕುಂಡಲಿ ಎಂಬ ಜ್ಞಾನಶಕ್ತಿ, ಆ ಶಕ್ತಿಯ ಬಾಗಿಲಿಗೆ ದ್ವಾರಪಾಲಕಿಯಾಗಿಪ್ಪಳು. ಅವಳು ಅಂಗರಂ ತಡವಳು, ನಿರಂಗರಂ ಬಿಡುವಳು ಎಂಬುದ ಶರಣ ತನ್ನ ಮನದಲ್ಲಿ ತಾನೆ ತಿಳಿದು ಅಲ್ಲಿಪ್ಪ ಮಹಾಲಿಂಗಮಂ ಶರಣ ಮಂತ್ರಮಾಲೆಯಂ ಮಾಡಿ ಮನದಲ್ಲಿ ಧರಿಸಿ, ಸೋಮಸೂರ್ಯರ ಕಾಲಾಟಮಂ ನಿಲ್ಲಿಸಿ, ಕುಂಭಕಮಂ ಇಂಬುಗೊಳಿಸಿ, ಝಂ ಝಂ ಎಂದು ಝೇಂಕರಿಸುತ್ತಿದ್ದ ಪೆಣ್ದುಂಬಿಯ ನಾದಮಂ ಚಿಣಿಮಿಣಿಯೆಂದು ಸಣ್ಣರಾಗದಿ ಘನವ ಸೋಂಕುತಿಪ್ಪ ವೀಣಾನಾದಮಂ ಲಿಂಗಲಿಂಗ ಎಂದು ಕರವುತಿಪ್ಪ ಘಂಟಾನಾದಮಂ ಢಂ ಢಂ ಎನುತಿಪ್ಪ ಪೂರಿತವಾದ ಭೇರಿನಾದಮಂ ಚಿಟಪಟಲು ಭುಗಿಲು ಭುಗಿಲೆನುತಿಪ್ಪ ಮೇಘನಾದಮಂ ಝಂ ಝಂ ಎಂದು ಎಡವಿಡದೆ ಬಲಿವುತಿಪ್ಪ ಪ್ರಣಮನಾದಮಂ ಓಂ ಹ್ರಾಂ ಹ್ರೀಂ ಹ್ರೂಂ ಹ್ರೀಂ ಎಂದು ಬೆಳಗಿ ಬೀರುತಿಪ್ಪ ದಿವ್ಯ ನಾದಮಂ, ಆರಣ್ಯ ಘೀಳಿಡುವಂತೆ ಹೂಂಕರಿಸುತಿಪ್ಪ ಸಿಂಹನಾದಮಂ ಈ ಪ್ರಕಾರ ನಾದಂಗಳ ಶರಣ ಕೇಳಿ ಮನಂ ದಣಿದು ಹರುಷಂ ಮಿಕ್ಕು ಆ ಬಾಗಿಲ ದಾಟಿ ಪಶ್ಚಿಮ ದಿಕ್ಕಿಗೆ ಮುಖವಾಗಲೊಡನೆ ಚೌಕಮಧ್ಯದಲ್ಲಿ ವಜ್ರ ವೈಢೂರ್ಯ ಪುಷ್ಯರಾಗ ಗೋಮೇಧಿಕ ಇಂತಿವರೊಳಗಾದ ನವರತ್ನಂಗಳ ಕಂಬ ಬೋದಿಗೆ ಹಲಗೆಗಳಿಂದ ಅನುಗೈದು ತೀರಿಸಿದ ಮಹಾಶ್ರೀಗುರುವಿನ ಒಡ್ಡೋಲಗದ ಪ್ರಭೆ ಆಕಾಶಮಂ ಸಲವುತಿಪ್ಪುದ ಕಂಡು ಬಹಿರಾವರಣದಿ ಎಸೆವ ಪ್ರಾಕಾರದಕೋಟೆ ಎರಡು ಹದಿನಾರು ಕೊತ್ತಳಗಳಲ್ಲಿ ಈಶಾನ್ಯ ಪರ್ಜನ್ಯ ಜಯಂತರೊಳಗಾದಿ ಮೂವತ್ತೆರಡು ತಂಡದ ಅನಂತ ವಸ್ತು ದೇವತೆಗಳ ಕಾವಲ ಅತ್ಯುಗ್ರಮಂ ಕಂಡು ಶರಣರ್ಗೆ ತಡಹಿಲ್ಲವೆಂಬುದಂ ತನ್ನ ಮನೋವೇಗದಿಂದ ಅರಿದು ಕಾವಲಾಗಿಪ್ಪ ವಸ್ತು ದೇವತೆಯ ಕೃಪಾದೃಷ್ಟಿಯಿಂದ ಸಂತೈಸಿ ಮುಕ್ತಿಪುರಕೆ ಮೂಲಸೂತ್ರವಾದ ಬ್ರಹ್ಮರಂಧ್ರದ ಪೂರ್ವದಿಕ್ಕಿನ ಚಂದ್ರಮಂಡಲದಲ್ಲಿಪ್ಪ ಬಾಗಿಲ ಬೀಗಮಂ ತೆಗೆದು ಶರಣ ಒಳಹೊಗಲೊಡನೆ ಬಹಿರಾವರಣದ ವೀದಿಯ ಓಲಗದೊಳಿಪ್ಪ ಹರಿಸುರ ಬ್ರಹ್ಮಾದಿ ದೇವತೆಗಳು ಮನು ಮುನಿ ಗರುಡ ಗಂಧರ್ವ ಇಂದ್ರ ಚಂದ್ರರೊಳಗಾದ ಅನಂತರೆಲ್ಲಾ ಅಂಜಿ ಕೆಲಸಾರೆ, ಸೋಮವೀದಿಯೊಳಿಪ್ಪ ಅನಂತ ರುದ್ರರೊಳಗಾದ ಇಪ್ಪತ್ತುನಾಲ್ಕು ತಂಡದ ಅನಂತರು, ಶಿವನ ಒಡ್ಡೋಲಗವ ನಡೆಸುವ ಪರಿಚಾರಕರು, ಅವರು ಬಂದು, ಶರಣಲಿಂಗದ ದೃಷ್ಟಿಸಂಧಾನವಾಗಲೆಂದು ಮುಖವಂ ಮಾಡಿ, ಸೂರ್ಯವೀದಿಯೊಳಿಪ್ಪ ಉಮಾಚಂಡಿಕೇಶ್ವರ ನಂದಿಕೇಶ್ವರರೊಳಗಾದ ಹದಿನಾರು ತಂಡದ ಅನಂತ ರುದ್ರರು ಬಂದು ಶರಣನ ಸನ್ಮಾನವಂ ಮಾಡಿ, ಅಗ್ನಿವೀದಿಯೊಳಿಪ್ಪ ಉಮೆ ಜೇಷ್ಠೆಯರೊಳಗಾದ ಎಂಟು ತಂಡದ ಅನಂತ ಶಕ್ತಿಯರು [ಕರ್ಪೂ]ರದ ಪುತ್ಥಳಿ ಬಂದು ಉರಿಯ ಪುತ್ಥಳಿಯ ಆಲಂಗಿಸಿದಂತೆ ಶರಣ ಬಂದು ಆ ಘನಲಿಂಗಮಂ ಅಮರ್ದಪ್ಪಿ ಪುಷ್ಪ ಪರಿಮಳದಂತೆ ಏಕವಾಗಿ, ಆ ಘನಲಿಂಗ[ವೆ] ತಾನೆಯಾದ ಮಹಾಗುರು ಸಿದ್ಧೇಶ್ವರನ ಶ್ರೀ ಚರಣಮಂ ನಾನು ಕರಸ್ಥಳದಲ್ಲಿ ಪಿಡಿದು ಪೂಜೆಯಂ ಮಾಡಲೊಡನೆ ಎನ್ನ ತನುವೆ ಪಂಚಬ್ರಹ್ಮ, ಪ್ರಾಣವೆ ಪರಬ್ರಹ್ಮವಾಯಿತ್ತು.