Index   ವಚನ - 45    Search  
 
ಮಣ್ಣು ಹಿಡಿದವರೆಲ್ಲರೂ ಬ್ರಹ್ಮನ ಸೃಷ್ಟಿಗೊಳಗಾದರು. ಹೊನ್ನ ಹಿಡಿದವರೆಲ್ಲರೂ ವಿಷ್ಣುವಿನ ಸ್ಥಿತಿಗೊಳಗಾದರು. ಹೆಣ್ಣು ಹಿಡಿದವರೆಲ್ಲರೂ ರುದ್ರನ ಸಂಹಾರಕ್ಕೊಳಗಾದರು. [ಮ]ಣ್ಣು ಹೊನ್ನು[ಹೆ]ಣ್ಣು ಬಿಟ್ಟು ಲಿಂಗಾಂಗ ಸಂಯೋಗವರಿಯದೆ ಸದಾಚಾರದಲ್ಲಿ ತಿರಿದುಂಡು ಆತ್ಮಸುಖಿಯಾದವರೆಲ್ಲರೂ ಫಲಭೋಗಕ್ಕೊಳಗಾದರು. ನಾನು ಮೂರ ಬಿಟ್ಟು ಆರ ಕಂಡು ಮೂದೇವರ ಗೆಲಿದೆ. ಆರ ಬಿಟ್ಟು ಮೂರ ಕಂಡು ಮನ ಮುಳುಗಿ ಮೂರೊಂದು ಪದವ ದಾಂಟಿ ಶಿವನೊಳಗಾದೆನಯ್ಯ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.