Index   ವಚನ - 55    Search  
 
ಶಿವನ ಕೃಪೆಯಿಂದ ಎನ್ನ ಪುಣ್ಯ ಹಣ್ಣಾದಂತೆ ಸರ್ವಾಂಗದಲ್ಲಿ ಪ್ರಸಾದಂಗಳ ನಾನು ಎಡೆಬಿಡುವಿಲ್ಲದೆ ಧರಿಸಿದ್ದ ಸಂಭ್ರಮವ ನೋಡಾ ಎಲೆ ಅಮ್ಮ. ಮುಕ್ತಿಪುರವ ತೋರುವ ಪ್ರಸಾದವ ಪಂಚಸ್ಥಾನದಲ್ಲಿ ಧರಿಸಿದೆ. ಪ್ರಸಿದ್ಧಪ್ರಸಾದ ಸಿದ್ಧಪ್ರಸಾದ ಶುದ್ಧಪ್ರಸಾದ ಆದಿಪ್ರಸಾದ ಮಹಾಪ್ರಸಾದ ಎಂಬ ಪಂಚಪ್ರಸಾದಂಗಳಂ ಪಂಚಸ್ಥಾನದಲ್ಲಿ ಧರಿಸಿದೆ. ಪ್ರಸಿದ್ಧಪ್ರಸಾದವ ಆಕಾಶದಲ್ಲಿ ಧರಿಸಿದೆ. ಸಿದ್ದಪ್ರಸಾದವ ಬ್ರಹ್ಮರಂಧ್ರದಲ್ಲಿ ಧರಿಸಿದೆ. ಆಚಾರಾದಿ ಪ್ರಸಾದಮಂ ತತ್ವ ಎರಡರ ಮೇಲೆ ಧರಿಸಿದೆ. ಮಹಾಪ್ರಸಾದಮಂ ಪಶ್ಚಿಮದಲ್ಲಿ ಧರಿಸಿದೆ. ಇಂತಪ್ಪ ಪರಬ್ರಹ್ಮವೆನಿಸುವ ಪ್ರಸಾದಂಗಳ ನಾನು ದಿನಾರಾತ್ರಿಯೆನ್ನದೆ ಪೂಜೆಯ ಮಾಡಿದಲ್ಲಿ ಎನಗೆ ಪರಮಾರ್ಥದರಿವು ಕೈಸಾರಿತು. ಆ ಪರಮಾರ್ಥದರಿವು ಕೈಸಾರಿದಲ್ಲಿಯೇ ಎನ್ನ ತನು ಮನ ಧನಂಗಳು ಪದಾರ್ಥಗಳಾದವು. ಆ ಪದಾರ್ಥಂಗಳ ಏಕಚಿತ್ತ ಮನೋಭಾವದಲ್ಲಿ ತೋಂಟದ ಸಿದ್ಧಲಿಂಗನೆಂಬ ನಿಷ್ಕಲಬ್ರಹ್ಮಕ್ಕೆ ಸಮರ್ಪಿಸಿದಲ್ಲಿಯೇ ಎನಗೆ ಅನಿತ್ಯತೆ ಕೆಟ್ಟು ನಿತ್ಯವೆಂಬುದು ನಿಜವಾಯಿತಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.