Index   ವಚನ - 42    Search  
 
ಹಲವು ಕಾಲ ಹಂಸೆಯ ಸಂಗದಲ್ಲಿದ್ದರೆ ಬಕನು ಶುಚಿಯಾಗಬಲ್ಲುದೆ? ನಿಧಿನಿಧಾನದೊಳಗಿದ್ದರೇನು ಪಾಷಾಣ ಹೊನ್ನಾಗಬಲ್ಲುದೆ? ಕಲ್ಪತರುಗಳ ಸಂಗದಲ್ಲಿದ್ದರೇನು ಕೊರಡು ಫಲವಾಗಬಲ್ಲುದೆ? ಕಾಶೀಕ್ಷೇತ್ರದಲ್ಲಿ ಶುನಕನಿದ್ದರೇನು ಅದರ ಕ್ಷೀರ ಪಂಚಾಮೃತವಾಗಬಲ್ಲುದೆ? ತೀರ್ಥದೊಳಗೊಂದು ಗಾರ್ದಭನಿದ್ದಡೇನು ಕಾರಣಿಕನಾಗಬಲ್ಲುದೆ? ಖಂಡುಗ ಹಾಲೊಳಗೆ ಇದ್ದಿಲ ಹಾಕಿದರೇನು ಬಿಳಿದಾಗಬಲ್ಲುದೆ? ಇದು ಕಾರಣ ಕೂಡಲಚೆನ್ನಸಂಗನ ಶರಣರ ಸನ್ನಿಧಿಯಲ್ಲಿದ್ದರೇನು ಅಸಜ್ಜನನು ಸದ್ಭಕ್ತನಾಗಬಲ್ಲನೆ?