Index   ವಚನ - 43    Search  
 
ಭಕ್ತರಾದೆವೆಂದು ಯುಕ್ತಿಗೆಟ್ಟು ನುಡಿವರು; ಭಕ್ತಸ್ಥಲವೆಲ್ಲರಿಗೆಲ್ಲಿಯದೊ? ಗುರುವಿನಲ್ಲಿ ತನುವಂಚನೆ, ಲಿಂಗದಲ್ಲಿ ಮನವಂಚನೆ, ಜಂಗಮದಲ್ಲಿ ಧನವಂಚನೆವುಳ್ಳನ್ನಕ್ಕ ಭಕ್ತನೆ? ಗುರುವಿನಲ್ಲಿ ಚಾರಿತ್ರವ, ಲಿಂಗದಲ್ಲಿ ಲಕ್ಷಣವ, ಜಂಗಮದಲ್ಲಿ ಜಾತಿಯನರಸುವನ್ನಕ್ಕ ಭಕ್ತನೆ? ಅಲ್ಲ, ಅವನು ದೋಷಾರ್ಥಿ. "ಭಕ್ತಶ್ಚ ಪ್ರತಿಪಕ್ಷಶ್ಚ ಸದಾಚಾರೇಣ ವರ್ಜಿತಃ | ಗುರುಲಿಂಗಜಂಗಮದ್ವೇಷೀ ಯೋ ನರಸ್ಸದುರಾತ್ಮಕಃ" || ಇದು ಕಾರಣ ಕೂಡಲಚೆನ್ನಸಂಗಮದೇವಾ ಭಕ್ತಸ್ಥಲವೆಲ್ಲರಿಗೆಲ್ಲಿಯದು?