ಮಜ್ಜನಕ್ಕೆರೆವುದು ಮಾದ ಬಳಿಕ,
ಮನ ಮತ್ತೊಂದಕ್ಕೆರಗದಿರಬೇಕು.
ಪೂಜೆಯ ಪೂಜಿಸಿ ಮಾದ ಬಳಿಕ,
ಪರರ ಬೋಧಿಸಲಾಗದು.
ಪೂಜಿಪ ಪೂಜೆಯ ಮಾಡುವುದು ಬಳಿಕ,
ಅಂಗಭೋಗಂಗಳ ನೆರೆ ಮಾಣಬೇಕು.
ಇಂತಿದು ಮೀರಿದ ಘನ ಅಗಮ್ಯವು
ಅದನರಿಯಬಾರದು.
ನಾನೀನೆಂಬ ಭ್ರಾಂತುಳ್ಳನ್ನಕ್ಕರ
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಬೇಕು.
ಕೂಡಲಚೆನ್ನಸಂಗಯ್ಯಾ,
ಇವ ಮಾಡದಿದ್ದರೆ ನಾಯಕ ನರಕ.