Index   ವಚನ - 195    Search  
 
ಅಷ್ಟತನುಮೂರ್ತಿಯೆಂಬ ಮಾತಿನ ಪಾತಕವ ಕೇಳಲಾಗದು. ಪೃಥ್ವಿಯಂತೆ ಕಠಿಣವುಳ್ಳಾತನೆ? ಅಪ್ಪುವಿನಂತೆ ಓಟ ಭರತವುಳ್ಳಾತನೆ? ತೇಜದಂತೆ ತೃಣಕಾಷ್ಠವಿಲ್ಲದಿರೆ ನಂದುವಾತನೆ? ವಾಯುವಿನಂತೆ ಚಲನೆವುಳ್ಳಾತನೆ? ಆಕಾಶದಂತೆ ಬಯಲಾದಾತನೆ? ಸೋಮಸೂರ್ಯರಂತೆ ದಿವಾರಾತ್ರಿಯ ನಡೆಸುವಾತನೆ? ಜೀವಾತ್ಮನಂತೆ ಜನನ ಮರಣವುಳ್ಳಾತನೆ? ಇದು ಕಾರಣ ಕೂಡಲಚೆನ್ನಸಂಗಯ್ಯಾ ನೀ ನಿನ್ನಂತೆ, ಇವರೆಲ್ಲರೂ ನೀನಿರಿಸಿದಂತೆ.