ಸರ್ವವೂ ಶಿವನಿಂದ ಉದ್ಭವಿಸುವವೆಂದರೆ,
ಉದ್ಭವಿಸುವವೆಲ್ಲವೂ ಶಿವನೆ?
ಸಕಲ ಬಿಜವ ಬಿತ್ತುವನೊಕ್ಕಲಿಗನೆಂದರೆ
ಆ ಬೆಳೆ ತಾನೊಕ್ಕಲಿಗನೆ?
ಮಡಕೆಯ ಕುಂಬಾರ ಮಾಡುವನೆಂದರೆ,
ಆ ಮಡಕೆ ತಾ ಕುಂಬಾರನೆ?
ಕಬ್ಬುನವ ಕಮ್ಮಾರ ಮಾಡುವನೆಂದರೆ,
ಆ ಕಬ್ಬುನ ತಾ ಕಮ್ಮಾರನೆ?
ಆ ಪರಿಯಲಿ ಸಕಲ ಜಗತ್ತಿನ
ಸಚರಾಚರವನು ಮಾಡುವನೆಂದರೆ,
ಆ ಸಚರಾಚರವು ಶಿವನೆ?
ಅಹಂಗಾದರೆ ಅಷ್ಟಾದಶವರ್ಣವೇಕಾದವು?
ಚೌರಾಸಿಲಕ್ಷ ಜೀವರಾಶಿಗಳೇಕಾದವು?
ಸುಖ-ದುಃಖ ಸ್ವರ್ಗ-ನರಕಂಗಳೇಕಾದವು?
ಉತ್ತಮ-ಮಧ್ಯಮ-ಕನಿಷ್ಠಂಗಳೇಕಾದವು?
ಪುಣ್ಯ-ಪಾಪ, ಭವಿ-ಭಕ್ತರೆಂದೇಕಾದವು?
ಇದು ಕಾರಣ, ಸದಾಚಾರ ಸದ್ಭಕ್ತಿಯಲ್ಲಿಪ್ಪಾತನೆ ಶಿವ.
ಅಂತಲ್ಲದೆ ಸರ್ವವೂ ಶಿವನೆಂದರೆ
ಅಘೋರ ನರಕ ಕೂಡಲಚೆನ್ನಸಂಗಯ್ಯಾ.