ಯತ್ರ ಜೀವಸ್ತತ್ರ ಶಿವ'ನೆಂಬ
ಬಾಲಭಾಷೆಯ ಕೇಳಲಾಗದು.
ಶಿವಶಿವಾ! 'ಯತ್ರಜೀವಸ್ತತ್ರ ಶಿವ'ನಾದರೆ
ಜೀವಂಗೆ ಮರಣವೇಕೋ?
'ಯತ್ರ ಜೀವಸ್ತತ್ರ ಶಿವ'ನಾದರೆ
ಜನನ ಸ್ಥಿತಿ ಮರಣ ರುಜೆ ಸಂಸಾರ ಬಂಧನವೇಕೋ?
'ಯತ್ರ ಜೀವಸ್ತತ್ರ ಶಿವ'ನಾದರೆ
ಪುಣ್ಯಪಾಪ ಪ್ರಳಯಕಾಲ ಕಲ್ಪಿತವೇಕೊ?
ಇದು ಕಾರಣ, 'ಯತ್ರ ಜೀವಸ್ತತ್ರ ಶಿವ'ನಲ್ಲ,
ಉತ್ಪತ್ತಿ ಸ್ಥಿತಿ ಪ್ರಳಯರಹಿತನು ಸದ್ಭಕ್ತರಲ್ಲಿಪ್ಪನಲ್ಲದೆ
ಮತ್ತೆಲ್ಲಿಯೂ ಇಲ್ಲ, ಕೂಡಲಚೆನ್ನಸಂಗಮದೇವ.