ಪ್ರಣವಮಂತ್ರವ ಕರ್ಣದಲ್ಲಿ
ಹೇಳಿದಾತನೆ ಶ್ರೀಗುರು-
ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡಿದ ಬಳಿಕ
ನುಡಿಯ ಕೇಳಲಾಗದು. ಒಳಗಿಪ್ಪನೆ ಲಿಂಗದೇವ?
ಮಲ ಮೂತ್ರ ಮಾಂಸವ ಹೇಸಿಕೆಯೊಳಗೆ ಪ್ರಾಣವಿಪ್ಪುದಲ್ಲದೆ,
ಆ ಪ್ರಾಣನ ತಂದು ತನ್ನ ಇಷ್ಟಲಿಂಗದಲ್ಲಿರಿಸಿ
ನೆರೆಯಬಲ್ಲಾತನೆ ಪ್ರಾಣಲಿಂಗ ಸಂಬಂಧಿ.
ತನ್ನ ಇಷ್ಟಲಿಂಗದಲ್ಲಿ ದಾಸೋಹವ ಮಾಡಲರಿಯದೆ
ಹಲವು ಬಯಕೆಯ ಬಯಸುವ
ಮಿಟ್ಟೆಯ ಭಂಡರನೆನ್ನತ್ತ ತೋರದಿರು,
ಕೂಡಲ ಚೆನ್ನಸಂಗಮದೇವಾ!