Index   ವಚನ - 257    Search  
 
ರೂಹಿಲ್ಲದ ನೆಳಲಿಂಗೆ ಮಳಲ ಬೊಂಬೆಯ ಮಾಡಿ, ನಾದ ಬಿಂದುವಿನಲ್ಲಿ ಪುದಿಸಿ, ಆರಿಗೂ ಮೈದೋರದೆ ಏಡಿಸಿ ಕಾಡಿತ್ತು ಶಿವನ ಮಾಯೆ. ಕಾಯದ ಕಳವಳಕ್ಕೆ ಮುಂದೆ ರೂಪಾಗಿ ತೋರಿತ್ತಲ್ಲದೆ, ಅದು ತನ್ನ ಗುಣವಲ್ಲದೆ [ಬೇರೆ] ತೋರುತ್ತಿಲ್ಲ. ಅಂಗಭೋಗವನೆ ಕುಂದಿಸಿ ಪ್ರಸಾದವ ರುಚಿಸಿಹೆನೆಂಬ ಲಿಂಗವಂತರೆಲ್ಲರೂ ಅರೆವೆಣಗಳಾಗಿ ಹೋದರು. ಅಂಗಭೋಗವೆ ಲಿಂಗಭೋಗ, ಲಿಂಗಭೋಗವೆ ಅರ್ಪಿತ. "ಸ್ವಕೀಯಃ ಪಾಕಸಂಬಂಧೀ ಭೋಗೋ ಜಂಗಮವರ್ಜಿತಃ| ನಾಸ್ತಿ ಲಿಂಗಾರ್ಚನಂ ಚೈವ ಪ್ರಸಾದೋ ನಿಷ್ಫಲೋ ಭವೇತ್"|| ಲಿಂಗಕ್ಕೆಂದು ಬಂದ ರುಚಿ ಜಂಗಮಕ್ಕೆ ಬಾರದಿದ್ದಡೆ, ಜಂಗಮಕ್ಕೆಂದು ಬಂದ ರುಚಿ ಲಿಂಗಕ್ಕೆ ಬಾರದಿದ್ದಡೆ. ಲಿಂಗಜಂಗಮಭರಿತವರಿಲ್ಲ. ಇದು ಕಾರಣ, ಕೂಡಲಚೆನ್ನಸಂಗಯ್ಯಾ ಪಾಕಸಂಬಂಧಿಗೆ ಪ್ರಸಾದ ದೂರ.