Index   ವಚನ - 269    Search  
 
ನಡೆವ ನುಡಿವ ಚೈತನ್ಯವುಳ್ಳನಕ್ಕ ಒಡಲ ಗುಣಂಗಳಾರಿಗೂ ಮಾಣವು. ನೋಡುವ ನಯನ, ಕೇಳುವ ಶ್ರೋತ್ರ, ವಾಸಿಸುವ ಘ್ರಾಣ, [ಮುಟ್ಟವ ತ್ವಕ್ಕು, ರುಚಿಸುವ ಚಿಹ್ವೆ] ತಾಗಿತ್ತೆನಬೇಡ. ನೋಡುತ್ತ [ಕೇಳುತ್ತ ವಾಸಿಸುತ್ತ ಮುಟ್ಟುತ್ತ, ರುಚಿಸುತ್ತ] ಲಿಂಗಾರ್ಪಿತವಮಾಡಿ ಲಿಂಗಭೋಗೋಪಭೋಗಿಯಾದ ಪ್ರಸಾದಿಗಳಿಗೆ ಸರ್ವಾಂಗಶುದ್ಧವೆಂಬುದಿದೆಯಯ್ಯಾ. ಕಾಯತ್ರಯಂಗಳ ಜೀವತ್ರಯಂಗಳ ಭಾವತ್ರಯಂಗಳನೊಂದು ಮಾಡಿ; ಸುಖ-ದುಃಖ, ಗುಣ-ನಿರ್ಗುಣಂಗಳೆಂಬ ಉಭಯವ, ಲಿಂಗದಲ್ಲಿ ಏಕವ ಮಾಡಿ; ಅಹುದು-ಅಲ್ಲ, ಬೇಕು-ಬೇಡೆಂಬ ಸಂಶಯವ ಕಳೆದು; ಕೂಡಲಚೆನ್ನಸಂಗನ ಆದಿಯ ಪುರಾತನರು ಮಾಡಿದ ಪಥವಿದು.