Index   ವಚನ - 326    Search  
 
ಚತುರ್ಗ್ರಾಮ ಪಂಚೈದು ಭೂತದೊಳಗೆ ಸ್ಥೂಲವಾವುದು? ಸೂಕ್ಷ್ಮವಾವುದು? ಎಮಗೆ ಬಲ್ಲವರು ನೀವು ಹೇಳಿರೇ. ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರ, ಆವುದು ಘನ, ಆವುದು ಕಿರಿದು? ಎಮಗೆ ಬಲ್ಲವರು ನೀವು ಹೇಳಿರೇ, ಶುದ್ಧ ಸಿದ್ಧ ಪ್ರಸಿದ್ಧವೆಂದು ಹೆಸರಿಟ್ಟುಕೊಂಡು ನುಡಿವಿರಿ, ಓಗರವಾವ ಕಡೆ? ಪ್ರಸಾದವಾವ ಕಡೆ? ಎಮಗೆ ಬಲ್ಲವರು ನೀವು ಹೇಳಿರೇ, ಇಕ್ಕಿದ ರಾಟಳ ತುಂಬುತ್ತ ಕೆಡಹುತ್ತಲಿದೆ. ಇಕ್ಕಿದ ರಾಟಳ ಮುರಿದು ಸೂತ್ರ ಹರಿದು ನಿಶ್ಶೂನ್ಯವಾದಡೆ ಕೂಡಲಚೆನ್ನಸಂಗನಲ್ಲಿ ಮಹಾಪ್ರಸಾದಿಯೆಂಬೆನು.