Index   ವಚನ - 337    Search  
 
ಪೃಥ್ವಿಮದ ಸಲಿಲಮದ ಪಾವಕಮದ [ಪವನಮದ] ಅಂಬರಮದ ರವಿಮದ ಶಶಿಮದ ಆತ್ಮಮದ- ಇಂತೀ ಅಷ್ಟಮದಂಗಳ ವಿವರ: ಪೃಥ್ವಿಮದವೆತ್ತಿದಲ್ಲಿ ತನುಗುಣಭರಿತನಾಗಿಹ, ಸಲಿಲಮದವೆತ್ತಿದಲ್ಲಿ ಸಂಸಾರಭರಿತನಾಗಿಹ, ಪಾವಕಮದವೆತ್ತಿದಲ್ಲಿ ಕಾಮ್ಯರಸಭರಿತನಾಗಿಹ, ಪವನಮದವೆತ್ತಿದಲ್ಲಿ ಇರ್ದ ಠಾವಿನಲ್ಲಿರ್ದು ಜಂಬೂದ್ವೀಪಭರಿತನಾಗಿಹ, ಅಂಬರಮದವೆತ್ತಿದಲ್ಲಿ ವಾಹನಭರಿತನಾಗಿಹ, ರವಿ ಮದವೆತ್ತಿದಲ್ಲಿ ಕೋಪಾಗ್ನಿಭರಿತನಾಗಿಹ, ಶಶಿಮದವೆತ್ತಿದಲ್ಲಿ ಚಿಂತಾಭರಿತನಾಗಿಹ, ಆತ್ಮಮದವೆತ್ತಿದಲ್ಲಿ ಅಹಂಕಾರಭರಿತನಾಗಿಹ. ಇಂತೀ ಅಷ್ಟಮದವಳಿದು ನಿಜವನರಿಯ ಬಲ್ಲರೆ, ಕೂಡಲಚೆನ್ನಸಂಗಯ್ಯನಲ್ಲಿ ಶಿವಯೋಗಿಗಳೆಂಬೆನು.