ಜೈನನ ಮನದ ಕೊನೆಯ [ಮೊನೆಯ] ಮೇಲೆ
ಕೊಲೆಯಿಪ್ಪುದಲ್ಲದೆ ವ್ರತವಿಲ್ಲ.
ಸನ್ಯಾಸಿಯ ಮನದ ಕೊನೆಯ ಮೊನೆಯ ಮೇಲೆ
ಹೆಣ್ಣಿಪ್ಪುದಲ್ಲದೆ ಸನ್ಯಾಸವಿಲ್ಲ.
ತಪಸ್ವಿಯ ಮನದ ಕೊನೆಯ ಮೊನೆಯ ಮೇಲೆ
ಸಂಸಾರವಿಪ್ಪುದಲ್ಲದೆ ತಪಸ್ಸಿಲ್ಲ.
ವಿಪ್ರನ ಮನದ ಕೊನೆಯ ಮೊನೆಯ ಮೇಲೆ
ಹೊಲೆಯಿಪ್ಪುದಲ್ಲದೆ ವಿಪ್ರತ್ವವಿಲ್ಲ.
ಶೀಲವಂತನ ಮನದ ಕೊನೆಯ ಮೊನೆಯ ಮೇಲೆ
ಭವಿಯಿಪ್ಪನಲ್ಲದೆ ಲಿಂಗವಿಲ್ಲ.
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣರ ಮನದ
ಕೊನೆಯ ಮೊನೆಯ ಮೇಲೆ ಲಿಂಗವಪ್ಪುದು.