Index   ವಚನ - 408    Search  
 
ಸುಜ್ಞಾನವೆಂಬ ಭಾವವು ಗುರುವಿನಲ್ಲಿ ಸಾಹಿತ್ಯವು. ಜ್ಞಾನವೆಂಬ ಭಾವವು ಶಿಷ್ಯನಲ್ಲಿ ಸಾಹಿತ್ಯವು. ಮನವೆಂಬ ಭಾವವು ಲಿಂಗದಲ್ಲಿ ಸಾಹಿತ್ಯವು. ಲಿಂಗಕ್ಕೆ ಮಜ್ಜನ ಮಾಡಲಾಗದು, ಅದೇನು ಕಾರಣ? ಮನವೆಂಬ ಲಿಂಗವು ಭಾವದಲ್ಲಿ ಸಾಹಿತ್ಯವಾದ ಕಾರಣ. ಲಿಂಗಕ್ಕೆ ಗಂಧ ಧೂಪ ನಿವಾಳಿಯ ಕುಡಲಾಗದು, ಅದೇನು ಕಾರಣ? ನಿರ್ಗಮನವೆಂಬ ಲಿಂಗವು ನಾಸಿಕದಲ್ಲಿ ಸಾಹಿತ್ಯವಾದ ಕಾರಣ. ಲಿಂಗಕ್ಕೆ ಪೂಜೆಯ ಮಾಡಲಾಗದು. ಅದೇನು ಕಾರಣ? ಪರಿಮಳವೆಂಬ ಲಿಂಗವು ಮನಸ್ಥಳದಲ್ಲಿ ಸಾಹಿತ್ಯವಾದ ಕಾರಣ. ಲಿಂಗಕ್ಕರ್ಪಿತವ ಮಾಡಲಾಗದು ಅದೇನು ಕಾರಣ? ರುಚಿತತ್ವವೆಂಬ ಲಿಂಗವು ಜಿಹ್ವೆಯ ಕೊನೆಯ ಮೊನೆಯ ಮೇಲೆ ಸಾಹಿತ್ಯವಾದ ಕಾರಣ. ಲಿಂಗಕ್ಕೆ ರೂಪನರ್ಪಿಸಲಾಗದು, ಅದೇನು ಕಾರಣ ? ರೂಪಾತೀತವಾದ ಲಿಂಗವು ನೇತ್ರದಲ್ಲಿ ಸಾಹಿತ್ಯವಾದ ಕಾರಣ. ಇಂತು ಷಡುಸ್ಥಲವನರಿದು ಷಡುವರ್ಣವ ಮೀರಿ, ಚರವೆಂಬ ಜಂಗಮಸಾಹಿತ್ಯವಾದ ಕಾರಣ, ಭಕ್ತಗೆ ಮತ್ತೆ ಪ್ರಾಣಲಿಂಗವಿಲ್ಲಯ್ಯ. ಇದು ಕಾರಣ, ಕೂಡಲಚೆನ್ನಸಂಗಮದೇವಯ್ಯಾ, ಲಿಂಗ ಸಾಹಿತ್ಯವಾದವರಂತಿರಲಿ ಕಂಗಳ ನೋಟದಲ್ಲಿ ಜಂಗಮಸಾಹಿತ್ಯವಾದವರಪೂರ್ವ.