ಪ್ರಾಣಲಿಂಗವ ಸುಯಿಧಾನವ ಮಾಡು ಮಗನೇ, ಎಂದು
ಶ್ರೀ ಗುರು ಲಿಂಗವ ಕೊಟ್ಟನೇಕಾಂತದಲ್ಲಿ.
ಕೊಟ್ಟ ಲಿಂಗದ ನೇಮವ ಮರೆಯದೆ,
ಪ್ರಾಣಲಿಂಗದ ಪರಿಚಾರವ ಮಾಡುವರಾರೂ ಇಲ್ಲ.
ಅಂಗದಿಂದ ಆ ಪ್ರಾಣಲಿಂಗ ಹಿಂಗಿದರೆ
ಈ ಲಿಂಗವ ಮುಟ್ಟಿ ಪೂಜಿಸುವರೆಲ್ಲ ಭಂಗಿತರಾದರು.
ಅರುಹಿರಿಯರೆಲ್ಲರಿಗೆ ಶರಣಸಂಬಂಧ ಸಾಲದ ಕಾರಣ,
ಎಲೆಯ ಮರೆಯ ಕಾಯಂತೆ ಮರೆಯ ಮಾಡಿ, ಕುರುಹ ತೋರಿ
ನೆರೆ ಜಗವನಾಳಿಗೊಂಡ ಕೂಡಲಚೆನ್ನಸಂಗಯ್ಯ.