Index   ವಚನ - 435    Search  
 
ಶ್ರೋತ್ರೇಂದ್ರಿಯದ ಶ್ರುತದ ಅನುಭಾವವುಳ್ಳನಕ ಗುರುವಚನ ಕೇಳಿದೆನೆಂದು ಎಂತೆನಬಹುದು? ನೇತ್ರೇಂದ್ರಿಯದ ನೋಟದ ಅನುಭಾವವುಳ್ಳನಕ ಲಿಂಗವ ಭಾವಿಸಿದೆನೆಂದು ಎಂತೆನಬಹುದು? ನಾಸಿಕೇಂದ್ರಿಯದ ಪರಿಮಳ ವಾಸನೆಯನುಭಾವವುಳ್ಳನಕ ಲಿಂಗದಲ್ಲಿ ಪರಿಮಳವ ವೇಧಿಸಿದೆನೆಂದು ಎಂತೆನಬಹುದು ? ಜಿಹ್ವೇಂದ್ರಿಯದ ರುಚಿಯ ರುಚಿಸುವನುಭಾವವುಳ್ಳನಕ ಪ್ರಸಾದವ ಸೇವಿಸಿದೆನೆಂದು ಎಂತೆನಬಹುದಯ್ಯ? ಸ್ಪರ್ಶೇಂದ್ರಿಯದ ಸೋಂಕಿನ ಸುಖದ ಅನುಭಾವವುಳ್ಳನಕ ಲಿಂಗೈಕ್ಯನಾದೆನೆಂದು ಎಂತೆನಬಹುದು? ಇವೆಲ್ಲವನು ಪರಿಚ್ಛೇದಿಸಿ ಭಾವನಿರ್ಭಾವಾಗದನಕ ಕೂಡಲಚೆನ್ನಸಂಗಯ್ಯನು ಶರಣರ ಮನದಲ್ಲಿ ನೆಲೆಗೊಳ್ಳನಾಗಿ ಅವರೆಂತು ಪ್ರಾಣಲಿಂಗಿಗಳೆಂಬೆನು?