Index   ವಚನ - 440    Search  
 
ಗುರುಲಿಂಗಜಂಗಮಪ್ರಸಾದ ಪ್ರಾಣಪ್ರವೇಶವಾದುದಾಗಿ ಲಿಂಗಪ್ರಾಣದೊಳಗೆ ಪ್ರಾಣಲಿಂಗ ನೋಡಾ. ಭಕ್ತಕಾಯದೊಳಗೆ ಪ್ರಸಾದಕಾಯ ನೋಡಾ. ವಿಶ್ವತೋ ಚಕ್ಷುವಿನೊಳಗೆ ಜ್ಞಾನಚಕ್ಷು ನೋಡಾ. ವಿಶ್ವತೋ ಮುಖದೊಳಗೆ ಸುಮುಖ ನೋಡಾ. ವಿಶ್ವತೋ ಬಾಹುವಿನೊಳಗೆ ನಮಸ್ಕಾರ ಬಾಹು ನೋಡಾ. ವಿಶ್ವತೋ ಪಾದದಲ್ಲಿ ನಿಂದ ಮಹತ್ಪಾದ ನೋಡಾ. ಇಂತಾದುದಾಗಿ, ಲಿಂಗವ ಮನದಲ್ಲಿ ನೆನೆದು ಲಿಂಗಕ್ಕೆ ನೆನೆಯಲಿತ್ತು, ಪ್ರಸಾದವ ಮನದಲ್ಲಿ ನೆನೆದು ಪ್ರಸಾದಿ ಪರಿಣಾಮಿಸುವ, ಲಿಂಗವ ದೃಷ್ಟಿಯಲ್ಲಿ ನೋಡಿ ಲಿಂಗಕ್ಕೆ ನೋಡಲಿತ್ತು, ಪ್ರಸಾದನಯನದಿಂದ ನೋಡಿ, ನಯನಪ್ರಸಾದವ ನಯನದಿಂದ ನೋಡಿಸಿ, ಪರಿಣಾಮಿಸುವ. ಲಿಂಗವ ಶ್ರೋತ್ರದಿ ಕೇಳಿ ಲಿಂಗಕ್ಕೆ ಕೇಳಲಿತ್ತು, ಪ್ರಸಾದ ಶ್ರೋತ್ರದಿಂ ಶಬ್ದಪ್ರಸಾದಿ ಕೇಳಿ ಪರಿಣಾಮಿಸುವ. ಲಿಂಗ[ವ] ಸ್ಪರುಶನದಿಂ ಸ್ಪರುಶಿಸಿ ಲಿಂಗಕ್ಕೆ ಪರುಶಿಸಲಿತ್ತು, ಪ್ರಸಾದ ಸ್ಪರುಶನದಿಂ ಸ್ಪರುಶಿಸಿ ಸ್ಪರುಶನಪ್ರಸಾದವ ಪ್ರಸಾದಿ ಭೋಗಿಸಿ ಪರಿಣಮಿಸುವ. ಲಿಂಗ ಜಿಹ್ವೆಯಿಂದ ಮಹಾರುಚಿಯ ರುಚಿಸಿ ಲಿಂಗಕ್ಕೆ ರುಚಿಸಲಿತ್ತು ಪ್ರಸಾದಜಿಹ್ವೆಯಿಂ ಮಹಾರುಚಿಯ ರುಚಿಸಿ ರುಚಿಪ್ರಸಾದವ ಪ್ರಸಾದಿ ಭೋಗಿಸಿ ಪರಿಣಾಮಿಸುವ. ಇಂತು ಸರ್ವಭೋಗದ್ರವ್ಯದ ಲಿಂಗಕಾಯದಿಂ ಭೋಗಿಸಿ ಲಿಂಗಕ್ಕೆ ಭೋಗಿಸಲಿತ್ತು, ಪ್ರಸಾದಕಾಯದಿಂ ಸರ್ವಭೋಗವನೂ ಭೋಗಿಸುವವ ಪ್ರಸಾದಿ. ಇದು ಕಾರಣ, ಭಕ್ತದೇಹಿಕದೇವ ಕೂಡಲಚೆನ್ನಸಂಗಮದೇವನೆಂದರಿದು ಪ್ರಸಾದಿಯ ಪ್ರಸಾದಿಯಾದೆನಯ್ಯಾ.