ಆಸೆಯಾಮಿಷ ತಾಮಸ ಹುಸಿ ವಿಷಯವೆಲ್ಲವನೂ
ಸಟೆಯಂ ಮಾಡಿ,
ಸದ್ಗುಣವೆಂಬ ಗೋಮಯವನು
ವಿನಯಾರ್ಥವೆಂಬ ಉದಕದಲ್ಲಿ
ಸಮ್ಮಾರ್ಜನೆಯಂ ಮಾಡಿ,
ಕುಟಿಲ ಕುಹಕ ಕ್ರೋಧ ಕ್ಷುದ್ರ ಮಿಥ್ಯಮಿವೆಲ್ಲವ
ಪುಡಿಗುಟ್ಟಿ ರಂಗವಾಲಿಯನಿಕ್ಕಿ,
ಸುಮತಿಯೆಂಬ ಹತ್ತಿಯಂ ಕೊಂಡು,
ಪುಣ್ಯ ಪಾಪಗಳೆಂಬ ಕಸಗೊಚ್ಚಿಯಂ ಕಳೆದು,
ದೃಢವೆಂಬ ಬತ್ತಿಯಂ ತೀವಿ,
ತನುವೆಂಬ ಪ್ರಣತೆಯಲ್ಲಿ ಕಿಂಕಿಲವೆಂಬ ತೈಲವನ್ನೆರೆದು,
ಜ್ಞಾನವೆಂಬ ಜ್ಯೋತಿಯಂ ಪೊತ್ತಿಸಿ,
ಸಮತೆಸಲಿಲವೆಂಬ ಅಗ್ಗಣಿಯ ಮಜ್ಜನಕ್ಕೆರೆದು,
ನಿರ್ ಹೃದಯ ನಿಃಕಾಮ್ಯವೆಂಬ ಗಂಧಾಕ್ಷತೆಯಂ ಕೊಟ್ಟು,
ಅಷ್ಟದಳಕಮಳವ ಕೊಯ್ದು, ಪೂಜೆಯಂ ಮಾಡಿ,
ಪಂಚೇಂದ್ರಿಯ ವಿನಾಶವೆಂಬ ಪಂಚಾರತಿ,
ನಿರಂತರ ಅವಧಾನವೆ ನಿರಂಜನ,
ತನು ಮುಖಾದಿಗಳನೇಕಾರ್ಥ ಮಾಡಿ,
ಹಿಡಿವುದೇಕಾರತಿ.
ಸರ್ವಜೀವದಯಾಪರವೆಂಬ ಧೂಪವಂ ಬೀಸಿ,
ನಿರ್ಧಾರವೆಂಬ ನಿತ್ಯನೇಮವ ಸಲ್ಲಿಸಿ,
ಪರಮಾರ್ಥವೆಂಬ ನೈವೇದ್ಯವನಿಟ್ಟು,
ಶಿವಸುಖಸಂಕಥಾ ವಿನೋದದಿಂದರ್ಪಿತವ ಮಾಡಿ,
ಪರಿಣಾಮವೆಂಬ ಪ್ರಸಾದವ ಸ್ವೀಕರಿಸಿ,
ಸುಜ್ಞಾನಭರಿತನಾಗಿಹ.
ಇಂತಪ್ಪ ಲಿಂಗಾರ್ಚಕರ ಶ್ರೀಪಾದವ ತೋರಿ ಬದುಕಿಸಾ
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Āseyāmiṣa tāmasa husi viṣayavellavanū
saṭeyaṁ māḍi,
sadguṇavemba gōmayavanu
vinayārthavemba udakadalli
sam'mārjaneyaṁ māḍi,
kuṭila kuhaka krōdha kṣudra mithyamivellava
puḍiguṭṭi raṅgavāliyanikki,
sumatiyemba hattiyaṁ koṇḍu,
puṇya pāpagaḷemba kasagocciyaṁ kaḷedu,
dr̥ḍhavemba battiyaṁ tīvi,
Tanuvemba praṇateyalli kiṅkilavemba tailavanneredu,
jñānavemba jyōtiyaṁ pottisi,
samatesalilavemba aggaṇiya majjanakkeredu,
nir hr̥daya niḥkāmyavemba gandhākṣateyaṁ koṭṭu,
aṣṭadaḷakamaḷava koydu, pūjeyaṁ māḍi,
pan̄cēndriya vināśavemba pan̄cārati,
nirantara avadhānave niran̄jana,
tanu mukhādigaḷanēkārtha māḍi,
hiḍivudēkārati.
Sarvajīvadayāparavemba dhūpavaṁ bīsi,
nirdhāravemba nityanēmava sallisi,
paramārthavemba naivēdyavaniṭṭu,
śivasukhasaṅkathā vinōdadindarpitava māḍi,
pariṇāmavemba prasādava svīkarisi,
sujñānabharitanāgiha.
Intappa liṅgārcakara śrīpādava tōri badukisā
kūḍalacennasaṅgamadēvā.